ನ್ಯೂಸ್ ನಾಟೌಟ್: ಭಾರತೀಯ ಸೇನೆ ಅಗ್ನಿವೀರ್ ನೇಮಕಾತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಸೇನಾಪಡೆಗೆ ಸೇರಲು ಬಯಸುವ ಅಭ್ಯರ್ಥಿಗಳು ಮೊದಲು ಆನ್ಲೈನ್ ಮೂಲಕ ಸಾಮಾನ್ಯ ಪ್ರವೇಶ ಪರೀಕ್ಷೆಗೆ(CEE) ಹಾಜರಾಗಬೇಕು. ಆದರೆ, ಪಠ್ಯಕ್ರಮ ಅಥವಾ ಪರೀಕ್ಷಾ ಮಾದರಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸೇನೆಯ ಉನ್ನತ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಉತ್ತರ ವಿಭಾಗದ ಭಾರತೀಯ ಸೇನೆಯ ನೇಮಕಾತಿ ಸಮಿತಿಯ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಎನ್.ಎಸ್.ಸರ್ನಾ, ಆನ್ಲೈನ್ ಪರೀಕ್ಷೆಯ ಸ್ವರೂಪಕ್ಕೆ ಹೋಗುವ ನಿರ್ಧಾರವು ಅನೇಕ ಅಂಶಗಳಿಂದ ಪ್ರೇರಿತವಾಗಿದೆ, ಯುವಕರು ಈಗ ‘ತಾಂತ್ರಿಕವಾಗಿ ಬಹಳ ಜಾಗೃತರಾಗಿದ್ದಾರೆ’ ಮತ್ತು ಮೊಬೈಲ್ ಫೋನ್ ಗಳ ಬಳಕೆ ಹೆಚ್ಚಾಗಿದೆ, ಹಾಗಾಗಿ ಈ ಪರೀಕ್ಷೆಗಳನ್ನು ಬರೆಯಲು ಅಭ್ಯರ್ಥಿಗಳಿಗೆ ಕಷ್ಟವಾಗದು ಎಂದು ಅವರು ಅಭಿಪ್ರಾಯಪಟ್ಟರು.
ಸೇನೆಯು ಇತ್ತೀಚೆಗೆ ಅಗ್ನಿವೀರ್ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆಯನ್ನು ಘೋಷಿಸಿತು ಮತ್ತು ಅಗ್ನಿವೀರ್ ಸೇನಾಪಡೆಗೆ ಸೇರಲು ಬಯಸುವ ಅಭ್ಯರ್ಥಿಗಳು ಮೊದಲು ಆನ್ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಇ) ಗೆ ಹಾಜರಾಗಬೇಕಾಗುತ್ತದೆ, ನಂತರ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ಹಾಜರಾಗಬೇಕಾಗುತ್ತದೆ ಎಂದು ಅವರು ತಿಳಿಸಿದರು.
“ಈ ಮೊದಲು ಅಗ್ನಿವೀರ್ ಮತ್ತು ಇತರ ಸೇನಾ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆಗಳಿತ್ತು, ಅಭ್ಯರ್ಥಿಗಳು ಮೊದಲು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಒಳಗಾಗಬೇಕಾಗಿತ್ತು, ನಂತರ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗುತ್ತಿದ್ದರು ಮತ್ತು ಕೊನೆಗೆ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿತ್ತು, ಆದರೆ ಇನ್ನು ಮುಂದೆ ಆನ್ಲೈನ್ ಪ್ರವೇಶ ಪರೀಕ್ಷೆ (ಸಿಇಇ)ಯನ್ನು ‘ಮೊದಲ ಸ್ಕ್ರೀನಿಂಗ್ ಪ್ರಕ್ರಿಯೆ’ ಎಂದು ಪರಿಗಣಿಸಲಾಗಿದೆ, ಈ ಪ್ರಕ್ರಿಯೆಯು ಅಭ್ಯರ್ಥಿಗಳಿಗೆ ಸಹಾಯಕವಾಗಿದೆ ಮತ್ತು ‘ತಾಂತ್ರಿಕವಾಗಿ ತಿಳಿದಿರುವ ಮತ್ತು ದೈಹಿಕವಾಗಿ ಸದೃಢವಾಗಿರುವ ಯುವಕರನ್ನು’ ನೇಮಕ ಮಾಡಲು ಸೈನ್ಯಕ್ಕೆ ಅನುಕೂಲ ಮಾಡಿಕೊಡುತ್ತದೆ” ಎಂದು ಲೆಫ್ಟಿನೆಂಟ್ ಜನರಲ್ ಸರ್ನಾ ತಿಳಿಸಿದರು.
ನೇಮಕಾತಿ ಪ್ರಕ್ರಿಯೆಯಲ್ಲಿ ಉಂಟಾಗುವ ಖರ್ಚು ವೆಚ್ಚಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಈ ಮಾರ್ಪಾಡುಗಳನ್ನು ಮಾಡಲಾಗಿದೆ. ಇದು ಅಭ್ಯರ್ಥಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಸುಲಭವಾಗಿ ಸೇನಾ ಪರೀಕ್ಷೆಗಳನ್ನು ನಡೆಸಲು ಮತ್ತು ನಿರ್ವಹಿಸಲು ಸಹಕಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.