ನ್ಯೂಸ್ ನಾಟೌಟ್ : ಬೆಂಗಳೂರಿನಲ್ಲಿ ಯುವತಿಗೆ ಮೆಸೇಜ್ ಮಾಡಿದ್ದಕ್ಕೆ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಇದೀಗ ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಪ್ರಕರಣವನ್ನು ಭೇದಿಸಿರುವ ಪೊಲೀಸರು ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ನಲ್ಲಿ ಶವವನ್ನು ಪತ್ತೆ ಹಚ್ಚಿದ್ದಾರೆ.ಗೋವಿಂದರಾಜು ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ.
ಬೆಂಗಳೂರು ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ಕೊಲೆ ನಡೆದಿತ್ತು. ಯಶವಂತಪುರ ಸಮೀಪದ ಮತ್ತಿಕೆರೆ ನಿವಾಸಿ ಗೋವಿಂದರಾಜು ಕೊಲೆಯಾದ ವ್ಯಕ್ತಿ. ಈ ವ್ಯಕ್ತಿ ಕುಟುಂಬದಲ್ಲಿಯೇ ಹುಡುಗಿಯೊಬ್ಬಳನ್ನು ಪ್ರೀತಿಸಿದ್ದ ಎನ್ನಲಾಗಿದೆ.ಅನಿಲ್ ಕುಮಾರ್, ಭರತ್ ಮತ್ತಿತರ ಇಬ್ಬರು ಆರೋಪಿಗಳು ಕಳೆದ ಸೋಮವಾರ ಮತ್ತಿಕೆರೆಯಿಂದ ಗೋವಿಂದರಾಜನನ್ನು ಅಪಹರಿಸಿ ರಾಜ್ ಗೋಪಾಲ್ ನಗರದ ಅಂದರಳ್ಳಿಯಲ್ಲಿ ಕೊಲೆ ಮಾಡಿದ್ದರು. ಬಳಿಕ ಶವವನ್ನು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯ ಮಲಯಮಾರುತದ ಬಳಿ ವಾಹನದಲ್ಲಿ ತಂದು ಬಿಸಾಕಿದ್ದರು ಎಂಬ ಆರೋಪವಿತ್ತು.
ಗೋವಿಂದರಾಜು ಕಾಣೆಯಾಗಿರುವ ಬಗ್ಗೆ ಕುಟುಂಬದವರು ಯಶವಂತಪುರ ಠಾಣೆಗೆ ದೂರು ದಾಖಲಿಸಿದ್ದರು.ಇತ್ತ ಕುಟುಂಬದವರಿಗೆ ಅನಿಲ್ ಕುಮಾರ್ ಎಂಬವನ ಮೇಲೆ ಅನುಮಾನವಿದ್ದರಿಂದ ಪೊಲೀಸರು ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.ಭರತ್ ಮತ್ತಿತರ ಇಬ್ಬರು ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿದ್ದರು.
ಆದ್ರೆ ಇಂದು ಆರೋಪಿಗಳನ್ನು ಚಾರ್ಮಾಡಿ ಘಾಟಿಗೆ ಕರೆ ತಂದು ಯಶವಂತಪುರ ಠಾಣೆಯ ಸಬ್ ಇನ್ ಸ್ಪೆಕ್ಟರ್ ಮಹೇಶ್ ಅವರ ತಂಡ ಸ್ಥಳೀಯ ಸಮಾಜ ಸೇವಕರ ಜತೆ ಸೇರಿ ಮೃತದೇಹವನ್ನು ಪತ್ತೆ ಹಚ್ಚಿ ಮೇಲೆತ್ತಿ ಆಸ್ಪತ್ರೆಗೆ ಸಾಗಿಸಿದರು ಎಂಬ ಮಾಹಿತಿ ಲಭ್ಯವಾಗಿದೆ.