ನ್ಯೂಸ್ ನಾಟೌಟ್: ಹಿಜಾಬ್, ಜಿಹಾದ್, ಹಲಾಲ್ ಇಂತಹ ಪ್ರಕರಣಗಳಿಗೆ ಕೇಂದ್ರ ಬಿಂದುವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಮತ್ತೊಂದು ವಿವಾದವನ್ನು ಎದುರಿಸುತ್ತಿದೆ. ಬಂಟ್ವಾಳದ ಒಂದೇ ಸರ್ಕಲ್ನಲ್ಲಿ ಕೇಸರಿ-ಹಸಿರು ಬಾವುಟ ಕಾಣಿಸಿಕೊಂಡಿದ್ದು,ಇದೀಗ ಪೈಪೋಟಿ ಏರ್ಪಟ್ಟು ವಿವಾದಗಳಿಗೂ ಕಾರಣವಾಗಿದೆ. ಈ ಘಟನೆ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಒಂದೇ ಜಾತಿ, ಒಂದೇ ಮತ, ಒಂದೇ ಧರ್ಮ ಎಂದು ಸಾರಿದ ನಾರಾಯಣ ಗುರು ಹೆಸರಿರುವ ಸರ್ಕಲ್ ಮೇಲೆಯೇ ಕೇಸರಿ-ಹಸಿರು ಬಾವುಟದ ವಿವಾದ ಆರಂಭಗೊಂಡಿದ್ದು ನಿಜಕ್ಕೂ ಬೇಸರದ ಸಂಗತಿ.ಬಂಟ್ವಾಳದ ಪೇಟೆಯಲ್ಲಿ ಮಸೀದಿಯ ಊರೂಸ್ ಹಿನ್ನೆಲೆ ಸರ್ಕಲ್ನಲ್ಲಿ ಮುಸ್ಲಿಂ ಯುವಕರು ಹಸಿರು ಬಾವುಟ ಅಳವಡಿಸಿದ್ದರು.ಇದೀಗ ಬಿ.ಸಿ. ರೋಡ್ನ ಚಂಡಿಕಾ ಪರಮೇಶ್ವರಿ ದೇವಸ್ಥಾನ ಬ್ರಹ್ಮಕಲಶೋತ್ಸವ ಪ್ರಯುಕ್ತ ಹಸಿರು ಬಾವುಟದ ಮೇಲೆಯೇ ಹಿಂದೂ ಜಾಗರಣ ವೇದಿಕೆ ಕೇಸರಿ ಪತಾಕೆ ಹಾರಿಸಿದೆ. ಸರ್ಕಲ್ನಲ್ಲಿ ಭಗವಾಧ್ವಜ ಮತ್ತು ಕೇಸರಿ ಬಂಟಿಗ್ಸ್ ಹಾಕಿದ್ದು, ಇದೀಗ ಬಂಟಿಂಗ್ಸ್ ತೆರವು ಗೊಳಿಸಲು ಬಂಟ್ವಾಳ ಪೊಲೀಸರು ಹಿಂದೂ ಜಾಗರಣ ವೇದಿಕೆ ಪ್ರಮುಖರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಎರಡು ಕಡೆಗಳಲ್ಲಿಯೂ ಜಾತ್ರೆ ಹಿನ್ನಲೆ ಸಂಭ್ರಮ ಕಳೆಗಟ್ಟಿದೆ.ಆದರೆ ವಿವಾದ ಸೃಷ್ಟಿಯಾಗಿರುವುದು ತೀರಾ ಅಸಮಾಧಾನಕ್ಕೆ ಕಾರಣವಾಗಿದೆ. ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಪತಾಕೆ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಮಾಣಿ, ನಾರಾಯಣ ಗುರು ಸರ್ಕಲ್ ಹಿಂದೂಗಳಿಗೆ ಸೇರಿದ್ದು, ಅನ್ಯಧರ್ಮದ ಬಾವುಟಗಳನ್ನು ಹಾಕಲು ಬಿಡುವುದಿಲ್ಲ. ನಾವು ಪ್ರತಿವರ್ಷ ಚಂಡಿಕಾ ಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವಕ್ಕೆ ಸರ್ಕಲ್ನಲ್ಲಿ ಕೇಸರಿ ಬಾವುಟಗಳನ್ನು ಹಾಕುತ್ತೇವೆ ಎಂದರು. ಕೇಸರಿ ಬಾವುಟಗಳನ್ನು ಮುಟ್ಟಿದರೆ ಬಂಟ್ವಾಳ, ಬಿ.ಸಿ. ರೋಡ್ ಪೇಟೆಯಲ್ಲಿ ಎಲ್ಲೆಡೆ ಭಗವಾಧ್ವಜ ಅಳವಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.ಒಟ್ಟಿನಲ್ಲಿ ಕರಾವಳಿಯಲ್ಲಿ ಈ ಬಾವುಟ ವಿವಾದ ಜೋರಾಗುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ.
ಒಂದೇ ಜಾತಿ, ಒಂದೇ ಮತ, ಒಂದೇ ಧರ್ಮ ಎಂದು ಸಾರಿದ ನಾರಾಯಣ ಗುರು ಹೆಸರಿರುವ ಸರ್ಕಲ್ ಮೇಲೆಯೇ ಕೇಸರಿ-ಹಸಿರು ಬಾವುಟ ವಿವಾದವೇರ್ಪಟ್ಟಿರುವುದು ಸ್ಥಳೀಯರ ಅಸಮಾಧಾನಕ್ಕೂ ಕಾರಣವಾಗಿದೆ.