ನ್ಯೂಸ್ ನಾಟೌಟ್ : ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏಷ್ಯಾದ ಅತಿದೊಡ್ಡ ಏರ್ ಶೋ ‘ಏರೋ ಇಂಡಿಯಾ’ 14ನೇ ಆವೃತ್ತಿಗೆ ಇಂದು ತೆರೆ ಬೀಳಲಿದೆ. ಫೆ.13ರಿಂದ ಆರಂಭಗೊಂಡ ಏರೋ ಶೋಗೆ ಇಂದು ಕೊನೆ ದಿನ.ಏರ್ ಶೋನಲ್ಲಿ ನಾಲ್ಕನೇ ದಿನವಾದ ಗುರುವಾರ ಸಾಮಾನ್ಯ ಜನರು ಸಹ ಸಖತ್ ಎಂಜಾಯ್ ಮಾಡಿದ್ದರು.
ಮುಂದಿನ ಏರ್ಶೋ 2025ರ ಫೆಬ್ರವರಿಯಲ್ಲಿ ನಡೆಯಲಿದೆ. ಕೊನೆಯ ದಿನವಾದ ಇಂದು ಕೂಡ ಸಾರ್ವಜನಿಕರಿಗೆ ಪ್ರವೇಶವಕಾಶ ಇದ್ದು, ಎಂಜಾಯ್ ಮಾಡುತ್ತಿದ್ದಾರೆ.ದೈನಂದಿನ ಒತ್ತಡಗಳಿಂದ ಹೊರ ಬಂದು ಏರೋ ಶೋ ನೋಡಿ ರಿಲ್ಯಾಕ್ಸ್ ಮೂಡ್ ಗೆ ಬಂದಿದ್ದಾರೆ.ಮಕ್ಕಳಂತು ಲೋಹದ ಹಕ್ಕಿಗಳ ಕಲರವಕ್ಕೆ ಮನಸೋತು ಹೋಗಿದ್ದಾರೆ.ಒಂದಕ್ಕಿಂತ ಒಂದು ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಈ ಶೋ ಒಂದು ರೋಮಾಂಚನ ಅನುಭವವನ್ನೇ ನೀಡುತ್ತಿದೆ.ಇಂದು ಕೊನೆ ದಿನವಾದ್ದರಿಂದ ಏರೋ ಶೋ ವೀಕ್ಷಿಸಲು ಬೆಂಗಳೂರು ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಜನರು ಆಗಮಿಸಿ ಸಂಭ್ರಮಿಸುತ್ತಿದ್ದಾರೆ.
ಏರೋ ಇಂಡಿಯಾ ಪ್ರದರ್ಶನ ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದ ಲಕ್ಷಾಂತರ ಜನರು ಇಂದು ಬೆಳ್ಳಂಬೆಳಗ್ಗೆಯಿಂದಲೇ ಸಾಗರೋಪಾದಿಯಲ್ಲಿ ಯಲಹಂಕ ವಾಯುನೆಲೆಯತ್ತ ಬರುತ್ತಿದ್ದಾರೆ. ವೈಮಾನಿಕ ಪ್ರದರ್ಶನ, ಒಡಂಬಡಿಕೆ ಸೇರಿ ರಕ್ಷಣಾ ಸಚಿವಾಲಯದ ಹಲವು ಮಹತ್ವದ ಕಾರ್ಯಚಟುವಟಿಕೆಗಳು ನಾಲ್ಕು ದಿನಗಳಲ್ಲಿ ನಡೆದಿವೆ. ಪಾಸ್, ಟಿಕೆಟ್ ಹೊಂದಿರುವ ಸಾರ್ವಜನಿಕರು ಬೆಳಗ್ಗೆ ಮತ್ತು ಮಧ್ಯಾಹ್ನ ವಿಮಾನಗಳ ಹಾರಾಟದ ಪ್ರದರ್ಶನವನ್ನು ವೀಕ್ಷಿಸಬಹುದು. ಜತೆಗೆ ಪ್ರದರ್ಶನ ಮಳಿಗೆಗಳನ್ನೂ ವೀಕ್ಷಿಸಬಹುದು. ಸಾಮಾನ್ಯ ಜನತೆ ಬೆಂಗಳೂರಲ್ಲಿ ಇನ್ನು ಸೂರ್ಯಕಿರಣ, ಸಾರಂಗದ ಝಲಕ್ ವೀಕ್ಷಿಸಲು ಎರಡು ವರ್ಷ ಕಾಯಬೇಕಿದೆ.
ಏರ್ ಶೋ ನಡೆಯುವ ಯಲಹಂಕ ವಾಯುನೆಲೆಯಲ್ಲಿ ಎತ್ತ ನೋಡಿದ್ರೂ ಜನಸಾಗರವೇ ತುಂಬಿ ತುಳುಕಿದೆ. ಆಗಸದಲ್ಲಿ ಲೋಹದ ಹಕ್ಕಿಗಳ ಚಿತ್ತಾರ ನೋಡಿ ಜನ ಫುಲ್ ಖುಷಿ ಪಟ್ರು. ಸೂರ್ಯ ಕಿರಣ್, ಸಾರಂಗ್, ರಫೆಲ್ ಗಳ ಸ್ಟಂಟ್ ಜನರನ್ನ ಮಂತ್ರಮುಗ್ಧವಾಗಿಸಿತ್ತು.ಏರ್ ಶೋನಲ್ಲಿರೋ ಸ್ಟಾಲ್ ಗಳಿಗೂ ಜನರು ಭೇಟಿ ನೀಡಿ ಅಲ್ಲಿನ ಸಾಧನಗಳನ್ನ ಕಣ್ತುಂಬಿಕೊಂಡರು. ಕೊನೆಯ ದಿನವಾದ ಇಂದು ಕೂಡ ಎರಡು ಏರ್ ಶೋಗಳನ್ನ ಆಯೋಜನೆ ಮಾಡಿದ್ದು, ಸಾರ್ವಜನಿಕರ ವೀಕ್ಷಣೆಗೆ ಹಾಗೂ ಪಾರ್ಕಿಂಗ್ ವ್ಯವಸ್ಥೆಗೂ ವ್ಯವಸ್ಥೆ ಮಾಡಲಾಗಿದೆ.