ನ್ಯೂಸ್ ನಾಟೌಟ್: ಕಟೀಲು ಮೇಳದ ಖ್ಯಾತ ಭಾಗವತರಾಗಿರುವ ಬಲಿಪ ನಾರಾಯಣ ಭಾಗವತ ಇಂದು (ಗುರುವಾರ) ಸಂಜೆ ನಿಧನರಾಗಿದ್ದಾರೆ. ಅವರಿಗೆ 85 ವರ್ಷವಾಗಿತ್ತು. ಕಳೆದ ಕೆಲವು ದಿನಗಳಿಂದ ಅವರು ತೀವ್ರ ಅನಾರೋಗ್ಯಕ್ಕ ತುತ್ತಾಗಿದ್ದರು, ಇಂದು ಸಂಜೆ ಮೂಡಬಿದಿರೆಯಲ್ಲಿ ನಿಧನರಾದರು ಎಂದು ತಿಳಿದು ಬಂದಿದೆ.
ತೆಂಕು ತಿಟ್ಟಿನ ಯಕ್ಷಗಾನ ಪರಂಪರೆಯ ಕೊಂಡಿಯಾಗಿದ್ದ ಬಲಿಪ ನಾರಾಯಣ ಭಾಗವತರು ಕಂಚಿನ ಕಂಠದಿಂದ ಭಾರಿ ಜನಪ್ರಿಯರಾದವರು. ಅಲ್ಲದೆ ಏರುಪದಗಳಿಂದ ಜನರಿಗೆ ಕಿಕ್ ಹಚ್ಚಿಸುತ್ತಿದ್ದ ಬಲಿಪರು ಕಟೀಲು ಮೇಳದಲ್ಲಿ ಸುದೀರ್ಘ ಅವಧಿಯಿಂದ ಭಾಗವತರಾಗಿ ಕೆಲಸ ಮಾಡಿದ್ದರು. ಕಳೆದ ವರ್ಷವಷ್ಟೇ ಅವರ ಮಗ ಖ್ಯಾತ ಯಕ್ಷಗಾನ ಭಾಗವತ ಪ್ರಸಾದ್ ಭಾಗವತ ನಿಧನರಾಗಿದ್ದರು. ತಮ್ಮ ಕಂಚಿನ ಕಂಠ ಮತ್ತು ರಂಗನಡೆಯಿಂದ ಪ್ರಸಿದ್ಧರಾಗಿದ್ದರು. ಹಲವು ಯಕ್ಷಗಾನ ಪ್ರಸಂಗಗಳು ಕಂಠಸ್ಥವಾಗಿದ್ದವು. ಪ್ರಸಂಗಕರ್ತರಾಗಿಯೂ ಖ್ಯಾತರಾಗಿದ್ದರು. ಕಳೆದ ವರ್ಷ ನಮ್ಮನ್ನಗಲಿದ ಪ್ರಸಾದ ಬಲಿಪರು ಕಟೀಲು ಮೇಳದಲ್ಲಿದ್ದರು. ಇನ್ನೊಬ್ಬ ಮಗ ಬಲಿಪ ಶಿವಶಂಕರರು ಪ್ರಸ್ತುತ ಕಟೀಲು ಮೇಳದ ಪ್ರಧಾನ ಭಾಗವತರಾಗಿದ್ದಾರೆ. ಮುಗ್ಧಮನಸ್ಸಿನ ಬಲಿಪರು ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ‘ಬಲಿಪಯಾನ’ ಅವರಿಗೆ ಸಮರ್ಪಿಸಿದ ಅಭಿನಂದನ ಗ್ರಂಥ. ಮೂವರು ಪುತ್ರರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.