ನ್ಯೂಸ್ನಾಟೌಟ್: ನಾವು ಹುಟ್ಟು ಹೋರಾಟಗಾರರು. ಯಾವುದೇ ಬಂಧನಗಳಿಗೆ ಹೆದರುವುದಿಲ್ಲ. ನಮ್ಮ ಹೋರಾಟವನ್ನು ನಿಲ್ಲಿಸುವ ಯೋಚನೆಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ಸಿಖ್ಖರನ್ನು ಯಾರಿಂದಲೂ ತಡೆಯಲಾಗದು. ಒಂದು ವೇಳೆ ನಮಗೆ ಅಡ್ಡಿ ಬಂದರೆ ಇಂದಿರಾ ಗಾಂಧಿ ಅವರಿಗೆ ಬಂದ ಪರಿಸ್ಥಿತಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಬರಬಹುದು ಎಂದು ಖಲಿಸ್ತಾನಿ ತೀವ್ರಗಾಮಿ ಗುಂಪು ‘ವಾರಿಸ್ ಪಂಜಾಬ್ ಕೆ’ ಸಂಘಟನೆಯ ಮುಖ್ಯಸ್ಥ ಹಾಗೂ ಖಲಿಸ್ತಾನಿ ಮುಖಂಡ ಅಮೃತ್ ಪಾಲ್ ಸಿಂಗ್ ಬಹಿರಂಗ ಬೆದರಿಕೆ ಹಾಕಿದ್ದಾನೆ.
ಅಪಹರಣ ಪ್ರಕರಣದಲ್ಲಿ ಪಂಜಾಬ್ ಪೊಲೀಸರಿಂದ ಬಂಧಿತನಾಗಿರುವ ಅಮೃತಪಾಲ್ ಸಿಂಗ್ ಆಪ್ತ ಸಹಾಯಕ ಲವ್ಪ್ರೀತ್ ತೂಫಾನ್ ಸಿಂಗ್ ಎಂಬಾತನನ್ನು ಬಿಡುಗಡೆ ಮಾಡುವಂತೆ ಅಮೃತ್ಪಾಲ್ ಸಿಂಗ್ ಮತ್ತು ಆತನ ಬೆಂಬಲಿಗರು ಗುರುವಾರ ಅಮೃತಸರದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಖಲಿಸ್ತಾನಿ ಗುಂಪು ಮತ್ತು ಪೊಲೀಸರ ಮಧ್ಯೆ ಘರ್ಷಣೆ ಉಂಟಾಗಿತ್ತು. ಖಲಿಸ್ತಾನಿ ಹೋರಾಟಗಾರರಿಗೆ ಠಕ್ಕರ್ ಕೊಟ್ಟು ಮಾತನಾಡಿರುವ ಅಮಿತ್ ಶಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ಅವರಿಗೆ ಅಮೃತ್ ಪಾಲ್ ಸಿಂಗ್ ಬೆದರಿಕೆ ಹಾಕಿದ್ದಾರೆ.
ಲವ್ಪ್ರೀತ್ ತೂಫಾನ್ ಸಿಂಗ್ ಬಂಧನ ಖಂಡಿಸಿ ಅಮೃತ್ಪಾಲ್ ಬೆಂಬಲಿಗರು ಹಾಗೂ ಖಲಿಸ್ತಾನಿ ಹೋರಾಟಗಾರರು ಸಾವಿರಾರು ಸಂಖ್ಯೆಯಲ್ಲಿ ಒಟ್ಟಾಗಿ ಕೈಗಳಲ್ಲಿ ಬಂದೂಕು, ಖಡ್ಗ ಹಾಗೂ ಇತರ ಆಯುಧಗಳನ್ನು ಹಿಡಿದು ಬ್ಯಾರಿಕೇಡ್ಗಳನ್ನು ಪುಡಿ ಮಾಡಿ ಪೊಲೀಸ್ ಠಾಣೆಗೆ ನುಗ್ಗಲು ಯತ್ನಿಸಿದರು. ಈ ಎಲ್ಲ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಖಾಲಿಸ್ತಾನಿ ಚಳವಳಿಯನ್ನು ಹುಟ್ಟುಹಾಕಲು ಅವಕಾಶ ನೀಡುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದರು. ಇದೇ ಮಾತನ್ನು ಇಂದಿರಾ ಗಾಂಧಿ ಕೂಡ ಹೇಳಿದ್ದರು. ಅವರಿಗೆ ಏನಾಯಿತು ಎಂದು ಯೋಚಿಸಿಕೊಳ್ಳಿ, ಅವರಿಗೆ ಆದ ಗತಿಯೇ ನಿಮಗೂ ಆಗಬಹುದು. ಅಂತಹ ಪರಿಸ್ಥಿತಿಗೆ ಅವಕಾಶ ಕಲ್ಪಿಸಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಖಲಿಸ್ತಾನಿ ಹೋರಾಟಗಾರರ ಹೋರಾಟಕ್ಕೆ ಮಣಿದ ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳು ತುರ್ತು ಸಭೆ ನಡೆಸಿ ಕಾನೂನು ವ್ಯವಸ್ಥೆ ಹದಗೆಡುವ ಭೀತಿಯಿಂದ ತೂಫಾನ್ ಸಿಂಗ್ನನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದರು. ಇದರಿಂದ ಖಲಿಸ್ತಾನಿ ಹೋರಾಟಗಾರರು ಪ್ರತಿಭಟನೆ ಕೈ ಬಿಟ್ಟು ಶಾಂತರಾದರು. ಸದ್ಯ ತೂಫಾನ್ ಸಿಂಗ್ ಮತ್ತು ಅಮೃತ್ ಪಾಲ್ ಸಿಂಗ್ ವಿರುದ್ಧ ಅಪಹರಣ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದ್ದು, ಗಲಭೆ ಪ್ರಕರಣದ ತನಿಖೆಗೆ ಎಸ್ಐಟಿ ತಂಡ ರಚನೆ ಮಾಡಲಾಗಿದೆ.