ನ್ಯೂಸ್ ನಾಟೌಟ್: ಉತ್ತರಾಖಂಡದಲ್ಲಿ 35 ವರ್ಷದ ಆನೆಯೊಂದು ಅನಾರೋಗ್ಯದಿಂದ ಕುಸಿದುಬಿದ್ದಿದ್ದು, ಎದ್ದು ಓಡಾಡಲು ಆಗದೆ ತನ್ನ ಸವಾರಿಯನ್ನು ನಿಲ್ಲಿಸಿದೆ. ನಿಂತು ಆಹಾರ ಸೇವಿಸಲು, ನೀರು ಕುಡಿಯಲು ಸಾಧ್ಯವಾಗದೆ ಆನೆ ಚಿಂತಾಜನಕ ಸ್ಥಿತಿಯಲ್ಲಿದೆ. ಇದನ್ನು ಮನಗಂಡ ಎನ್ಜಿಒ ಸಂಸ್ಥೆಯೊಂದು ಇದರ ರಕ್ಷಣೆಗೆ ಮುಂದಾಗಿದ್ದು, ಇದರೊಂದಿಗೆ ಭಾರತೀಯ ಸೇನೆಯು ಕೈಜೋಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಇದು ಉತ್ತರಾಖಂಡದ ರಾಮನಗರ ಜಿಲ್ಲೆಯ ನಡೆದ ಘಟನೆ. ವಯೋಸಹಜ ಕಾರಣದಿಂದ ನಿತ್ರಾಣಗೊಂಡಿದ್ದ ಮೋತಿ ಹೆಸರಿನ ಆನೆ ಈಗ ವೈಲ್ಡ್ಲೈಫ್ ಎಸ್ಒಎಸ್ ಮತ್ತು ಸೇನೆಯ ಆರೈಕೆ ಮತ್ತು ಚಿಕಿತ್ಸೆಯ ಪರಿಣಾಮವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ಹೇಳಲಾಗಿದೆ.
ಅಸ್ವಸ್ಥಗೊಂಡಿದ್ದ ಆನೆಯ ಸ್ಥಿತಿ ತಿಳಿದ ಮಾಜಿ ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್ ಭಾರತೀಯ ಸೇನೆಯ ಸಹಾಯ ಯಾಚಿಸಿದರು. ಭಾರತೀಯ ಸೇನೆಯ ಇಂಜಿನಿಯರ್ಗಳ ತಂಡ ಮೋತಿಗೆ ಅವಶ್ಯಕವಿರುವ ಚಿಕಿತ್ಸೆಗೆ ಸಹಾಯ ಮಾಡಿದ್ದು, 24 ಗಂಟೆಗಳೊಳಗೆ ಅದು ಎದ್ದು ನಿಲ್ಲಲು ಬೇಕಾದ ತಾಂತ್ರಿಕ ಸಹಾಯವನ್ನು ಈ ತಂಡ ಮಾಡಿದೆ.
ಚಿಕಿತ್ಸೆ ಮತ್ತು ಉಪಚಾರದ ನಂತರ ಈಗ ನಿಂತುಕೊಂಡೇ ಆಹಾರ ಸೇವನೆ, ನೀರು ಕುಡಿಯಲು ಆರಂಭಿಸಿದೆ. ಆದರೂ ಇದರ ಆರೋಗ್ಯದ ಬಗ್ಗೆ ಭರವಸೆ ಅಷ್ಟಕ್ಕಷ್ಟೇ. ಚಿಕಿತ್ಸೆಗೆ ದೀರ್ಘ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಮೋತಿಯ ಉಳಿವಿಗಾಗಿ ಪ್ರಾರ್ಥಿಸುತ್ತಿದ್ದಾರೆ.