ನ್ಯೂಸ್ ನಾಟೌಟ್: ‘ಕನ್ನಡದ ಅಸ್ಮಿತೆ ಉಳಿಸಲು ಯಕ್ಷಗಾನದ ಪಾತ್ರ ಬಹಳ ಪ್ರಮುಖವಾದುದು’ ಎಂದು ಲೇಖಕ ಡಾ. ಆನಂದರಾಮ ಉಪಾಧ್ಯ ಹೇಳಿದರು.
86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೇ ದಿನ ಎರಡನೇ ವೇದಿಕೆಯ ಹತ್ತನೇ ಗೋಷ್ಠಿಯಲ್ಲಿ ಭಾನುವಾರ ‘ಯಕ್ಷಗಾನ ಸಾಹಿತ್ಯ’ ಕುರಿತು ಮಾತನಾಡಿದ ಅವರು, ಯಕ್ಷಗಾನ ಜೀವನ ಮೌಲ್ಯ ಹೇಳಿಕೊಡುತ್ತದೆ. ಅದು ಕಾಲಕಾಲಕ್ಕೆ ತೆರೆದುಕೊಳ್ಳುತ್ತಿದೆ. ಪೌರಾಣಿಕ ಕಥನಗಳಿಗೆ ಸಮಕಾಲೀನ ವಿಷಯ ಸೇರಿಸಿ ಯಕ್ಷಗಾನ ಜೀವಂತವಾಗುಳಿದಿದೆ ಎಂದರು.
ಯಕ್ಷಗಾನದಲ್ಲಿ ಈಗ ಮಹಿಳಾ ಭಾಗವತಿಕೆ ಕೂಡ ಆರಂಭಗೊಂಡಿದೆ. ಮೂಡಲಪಾಯ, ಪಡುವಲಪಾಯ ಪ್ರಕಾರದ ಅನೇಕ ಕವಿಗಳು ಯಕ್ಷಗಾನ ಸಾಹಿತ್ಯ ಕೃಷಿ ಮಾಡಿದ್ದಾರೆ. ಕಳೆದ 70 ವರ್ಷಗಳಲ್ಲಿ ಯಕ್ಷಗಾನ ಕವಿಗಳು ಸಣ್ಣ ಸಣ್ಣ ಕಿರು ಪ್ರಸಂಗಗಳನ್ನು ಬರೆದಿದ್ದಾರೆ. ಐದು ಸಾವಿರ ಯಕ್ಷಗಾನ ಕೃತಿಗಳು ಹೊರಬಂದಿವೆ. ವಿಫುಲವಾದ ಸಾಹಿತ್ಯ ಪ್ರಕಾರವಾಗಿದ್ದರೂ ಜನರ ಗಮನಕ್ಕೆ ಬಂದಿಲ್ಲ. ವಿದ್ವತ್ ವಲಯ ಕೂಡ ಯಕ್ಷಗಾನ ಸಾಹಿತ್ಯದ ಕಡೆಗೆ ಗಮನಹರಿಸಲಿಲ್ಲ. ಆದರೆ, ಇಂದು 1,700ಕ್ಕೂ ಹೆಚ್ಚು ಯಕ್ಷಗಾನ ಸಾಹಿತ್ಯ ಕೃತಿಗಳು ಡಿಜಿಟಲೀಕರಣಗೊಂಡಿವೆ ಎಂದು ಹೇಳಿದರು.