ನ್ಯೂಸ್ ನಾಟೌಟ್ : ವ್ಯಕ್ತಿಯೋರ್ವ ಯುವತಿಯೊಬ್ಬಳಿಗೆ ಚೂರಿ ಇರಿದ ಘಟನೆ ಪುತ್ತೂರಿನ ಮುಂಡೂರಿನಲ್ಲಿ ನಡೆದಿದ್ದು,ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಓರ್ವನನ್ನು ವಶಕ್ಕೆ ಪಡೆಯಲಾಗಿದೆ.ಸುಳ್ಯದ ಕನಕಮಜಲಿನ ಅಂಗಾರರವರ ಪುತ್ರ ಉಮೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.ಇದೀಗ ಪುತ್ತೂರು ಠಾಣಾ ಪೊಲೀಸರು ಆತ ಕೊಲೆ ಕೃತ್ಯಕ್ಕೆ ಬಳಸಿದ ಆಯುಧ ಹಾಗೂ ಸ್ಕೂಟರ್ ವಶ ಪಡಿಸಿಕೊಂಡಿದ್ದಾರೆ.
ಆರೋಪಿ ಉಮೇಶ್ ಮನೆಯಂಗಳದಲ್ಲೇ ಯುವತಿ ಹೊಟ್ಟೆಗೆ ಚೂರಿ ಇರಿದು,ಚೂರಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ. ಜಯಶ್ರೀ(೨೩) ಮೃತ ಯುವತಿಯಾಗಿದ್ದು,ಈಕೆ ಮುಂಡೂರಿನ ಕಂಪ ನಿವಾಸಿ ದಿ.ಗುರುವಪ್ಪ ಮತ್ತು ದೇವಕಿ ದಂಪತಿ ಪುತ್ರಿ. ಯುವತಿಯನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ನಿನ್ನೆ ಸಾವನ್ನಪ್ಪಿದ್ದಾಳೆ .
ತಾಯಿ ನೀಡಿದ ದೂರಿನಲ್ಲೇನಿತ್ತು?
ಜಯಶ್ರೀ ಬಿ.ಎಸ್.ಸಿ. ಪದವಿ ಮುಗಿಸಿ, ಮನೆಯಲ್ಲಿ ಇದ್ದು, ತಾಯಿ ದನಗಳಿಗೆ ಹುಲ್ಲನ್ನು ತರಲು ಮನೆಯ ಎದುರಿನ ತೋಟಕ್ಕೆ ಹೋಗಿ ತೋಟದಲ್ಲಿ ಹುಲ್ಲನ್ನು ತೆಗೆಯುತ್ತಿದ್ದಾಗ, ಹುಲ್ಲು ತೆಗೆಯುವಲ್ಲಿಗೆ ಅಮ್ಮಾ ಎಂದು ಕೂಗಿಕೊಂಡು ಬಂದಿರುತ್ತಾಳೆ. ಆಗ ಅವಳ ಹೊಟ್ಟೆಯಲ್ಲಿ ಗಾಯವಾಗಿ ರಕ್ತ ಸ್ರಾವವಾಗುತ್ತಿರುವುದು ಕಂಡ ತಾಯಿ ಗಿರಿಜಾ ಆಟೋ ರಿಕ್ಷಾದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಜಯಶ್ರೀ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಜಯಶ್ರೀ ಕೆಲವು ಸಮಯದಿಂದ ಕನಕಮಜಲಿನ ಉಮೇಶ್ ಎಂಬಾತನನ್ನು ಪ್ರೀತಿಸುತ್ತಿದ್ದು, ಆತನು ಆಗಾಗ ಮನೆಗೂ ಬಂದು ಹೋಗುತ್ತಿದ್ದ. ಇತ್ತೀಚೆಗೆ ಅವನ ಗುಣ ನಡತೆ ಇಷ್ಟವಾಗದೇ ಜಯಶ್ರೀ ಆತನಿಂದ ದೂರವಾಗಿದ್ದಳು.ಇದರಿಂದ ಉಮೇಶ್ ಅಸಮಾಧಾನಗೊಂಡಿದ್ದ. ಇದೇ ದ್ವೇಷದಿಂದ ಆತ ಕೃತ್ಯ ನಡೆಸಿರಬಹುದೆಂದು ಅಂದಾಜಿಸಲಾಗಿದೆ.ಯುವತಿಯ ಮನೆ ಹಾಗೂ ಯುವತಿಯ ಬಗ್ಗೆ ಆತನಿಗೆ ಮಾತ್ರ ಸಂಪೂರ್ಣ ಮಾಹಿತಿ ಇತ್ತು ಎನ್ನಲಾಗಿದೆ. ಈ ಕಾರಣಕ್ಕಾಗಿ ಸಂದರ್ಭವನ್ನು ಬಳಸಿಕೊಂಡು ಮನೆಗೆ ಬಂದು ಚಾಕುವಿನಿಂದ ಇರಿದು ಹತ್ಯೆ ನಡೆಸಿರಬಹುದೆಂದು ಮೃತಳ ತಾಯಿ ಗಿರಿಜಾ ಶಂಕೆ ವ್ಯಕ್ತಪಡಿಸಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.