ನ್ಯೂಸ್ ನಾಟೌಟ್ : ಮಂಗಳೂರು ಸಮೀಪದ ಮುಡುಪುವಿನ ವಿದ್ಯಾರ್ಥಿನಿಯೋರ್ವಳು ಜನಪದ ಗೀತೆಯಲ್ಲಿ ರಾಜ್ಯಮಟ್ಟದ ಸಾಧನೆ ಮಾಡಿದ್ದಾಳೆ.ಡಿ. ವಿ. ಎಸ್. ಸರಕಾರಿ ಪದವಿ ಪೂರ್ವ ಕಾಲೇಜು ಶಿವಮೊಗ್ಗ ದಲ್ಲಿ ನಡೆದ 2022-23ರ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಜನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ,ಊರಿಗೆ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಬಹುಮುಖ ಪ್ರತಿಭೆ:
ವಿದ್ಯಾರ್ಥಿನಿ ಹೆಸರು ಪಂಚಮಿ.ಕೆ. ಡಾ| ಕಿರಣ ಕೆ. ಯು ಮತ್ತು ಡಾ|ಪ್ರಮೀಳಾ ಕೊಳಕೆ ದಂಪತಿಗಳ ಪುತ್ರಿ.ತನ್ನ ಆರನೇ ವಯಸ್ಸಿನಿಂದಲೇ ಸಂಗೀತ ಕಲಾಸಿರಿ ವಿದುಷಿ ಮಂಜುಳಾ ಜಿ.ರಾವ್ ಗುರುಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾಳೆ. ಅವರ ಮಾರ್ಗದರ್ಶನದಂತೆ ಅನೇಕ ಪ್ರತಿಷ್ಟಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಇವಳದ್ದು. ಇದರ ಜತೆಗೆ ಚಿತ್ರಕಲೆ,ನೃತ್ಯ ಹಾಗೂ ಕ್ರೀಡಾ ಕ್ಷೇತ್ರದಲ್ಲಿಯೂ ಅರಳುತ್ತಿರುವ ಪ್ರತಿಭೆ. ಶ್ರೀ ಲಕ್ಷ್ಮೀ ನರಸಿಂಹ ಪೈ ವಿದ್ಯಾಲಯ ಪಾಣೆಮಂಗಳೂರು ಇಲ್ಲಿನ ಹೆಮ್ಮೆಯ ವಿದ್ಯಾರ್ಥಿನಿ.
ರಾಜ್ಯಮಟ್ಟದಲ್ಲಿ ಪ್ರಥಮ:
ಸೃಜನಶೀಲತೆ, ಮುಗ್ಧತೆ, ಧೈರ್ಯ, ಛಲ ಮತ್ತು ಸರಳತೆಯೇ ಇವಳ ಕಾರ್ಯ ಸಾಧನೆಯ ಗುಟ್ಟು. 2017-18 ರ ಕ್ಲಸ್ಟರ್ ಹಾಗೂ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಕ್ತಿಗೀತೆ ಗಾಯನ ವಿಭಾಗದಲ್ಲಿ ಪ್ರಥಮ, ಜಿಲ್ಲಾ ಮಟ್ಟದಲ್ಲಿ ತೃತೀಯ ಸ್ಥಾನ ಹಾಗೂ 2019-20 ರ ಕ್ಲಸ್ಟರ್ ಪ್ರತಿಭಾ ಕಾರಂಜಿಯ ಭಕ್ತಿಗೀತೆ ಗಾಯನ ವಿಭಾಗದಲ್ಲಿ ದ್ವಿತೀಯ ಸ್ಥಾನ.2022-23ರ ಪ್ರತಿಭಾ ಕಾರಂಜಿಯ ಜನಪದ ಗೀತೆ ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಹೆಮ್ಮೆ ಇವಳದ್ದು. ಇದೀಗ ಡಿ. ವಿ. ಎಸ್. ಸರಕಾರಿ ಪದವಿ ಪೂರ್ವ ಕಾಲೇಜು ಶಿವಮೊಗ್ಗ ದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಜನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಭರವಸೆಯ ವಿದ್ಯಾರ್ಥಿನಿಯಾಗಿದ್ದಾಳೆ.