ನ್ಯೂಸ್ ನಾಟೌಟ್ : ದಿನ ಇಡೀ ಹಾಸಿಗೆಯಲ್ಲಿ ಮಲಗಿರೋರನ್ನ ಕಂಡಾಗ ಆಲಸ್ಯದಿಂದ ಮಲ್ಕೊಂಡಿದ್ದಾನೆ.ಅವನಿಗೆ ಬೇರೇನೂ ಕೆಲಸವಿಲ್ಲ.ಅವನೊಬ್ಬ ಪೆದ್ದ, ದಡ್ಡ ಶಿಖಾಮಣಿ ಹೀಗೆ ಬೇರೆ ಬೇರೆ ಪದಗಳಿಂದ ಬೈಯುವವರು ಇದ್ದಾರೆ.ಆದರೆ ಹಾಸಿಗೆಯಲ್ಲಿ ಮಲಗಿಕೊಂಡೆ ಇರುವ ಹೊಸ ಉದ್ಯೋಗವೊಂದು ಸೃಷ್ಟಿಯಾಗಿದೆ.ಅದು ಕೂಡ ನಾಸಾದಲ್ಲಿ. ಸಂಬಳ ಬರೋಬ್ಬರಿ 1.5 ಲಕ್ಷ ರೂ.
24 ಜನರ ಹುಡುಕಾಟ:
ಸಂಸ್ಥೆ ಇದೀಗ 24 ಜನರ ಹುಡುಕಾಟದಲ್ಲಿ ತೊಡಗಿದೆ.ಮೊದಲೇ ಹೇಳಿದ ಹಾಗೆ ಎರಡು ತಿಂಗಳುಗಳ ಕಾಲ ಹಾಸಿಗೆಯಲ್ಲಿಯೇ ಕಾಲ ಕಳೆಯಲು ಬಯಸುವವರು ಇದ್ದರೆ ಅವರಿಗೆ ಉದ್ಯೋಗ ಫಿಕ್ಸ್. ಇಂತಹ ಜನರಿಗೆ ಸಂಸ್ಥೆ 1 ಲಕ್ಷಕ್ಕೂ ಅಧಿಕ ವೇತನ ನೀಡುವುದಾಗಿ ಹೇಳಿದೆ. ಕೆಲಸವಿಲ್ಲದೇ ಹಾಸಿಗೆಯಲ್ಲಿ ಸುಮ್ಮನೆ ಮಲಗೋದನ್ನ ತುಂಬಾ ಜನ ಇಷ್ಟ ಪಡುತ್ತಾರೆ.ಪ್ರತಿ ದಿನ ಕೆಲಸ ಮಾಡಿ ಸುಸ್ತಾದಾಗ ಒಮ್ಮೆ ರಜೆ ಸಿಗಲಪ್ಪ, ಇಡೀ ದಿನ ನಿದ್ದೆ ಮಾಡ್ತೀನಿ ಅಂತೆಲ್ಲ ಹೇಳುವವರು ನಿಮ್ಮ ಮಧ್ಯೆ ಇರಬಹುದು. ಅಂತವರಿಗೆ ಈ ಸುವರ್ಣಾವಕಾಶದ ಕುರಿತು ನೀವು ತಿಳಿದುಕೊಂಡರೆ ಒಳ್ಳೆಯದು. ಕೇವಲ ಪುರುಷರಿಗೆ ಮಾತ್ರವಲ್ಲ, ಮಹಿಳೆಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಉದ್ದೇಶವೇನು?
ಪ್ರತಿಷ್ಟಿತ ಸಂಸ್ಥೆ, ಲಕ್ಷಗಟ್ಟಲೇ ಸಂಬಳ ಅಂದ ಮೇಲೆ ಉದ್ದೇಶವಿಲ್ಲದಿರುತ್ತಾ? ಖಂಡಿತ ಇದೆ. 24 ಜನರನ್ನು ಸಂಸ್ಥೆಗೆ ಸೇರಿಸಿ ಅವರನ್ನು ಹಾಸಿಗೆಯ ಮೇಲೆ ಮಲಗಿಸಿ ಅವರ ದತ್ತಾಂಶ ಕಲೆಹಾಕುವ ಉದ್ದೇಶ ಸಂಸ್ಥೆ ಹೊಂದಿದೆ. ಒಂದು ವಿಶೇಷ ರೀತಿಯ ವಾತಾವರಣದಲ್ಲಿ ಕೃತಕ ಗುರುತ್ವಾಕರ್ಷಣೆಯಲ್ಲಿ ಈ ಜನರು ಕಾಲ ಕಳೆಯಬೇಕು. ಇಂತಹ ಪರಿಸ್ಥಿತಿಯಲ್ಲಿ ದೀರ್ಘ ಕಾಲ ಕಳೆದ ಬಳಿಕ ವ್ಯಕ್ತಿಯ ಮೇಲೆ ಯಾವ ರೀತಿಯ ಪ್ರಭಾವ ಉಂಟಾಗುತ್ತದೆ ಮತ್ತು ಅದರ ಪ್ರತ್ಯಕ್ಷ ಮತ್ತು ದೂರಗಾಮಿ ಪರಿಣಾಮಗಳೇನು ಎಂಬುದು ತಿಳಿದುಕೊಳ್ಳುವುದು ಸಂಸ್ಥೆಯ ಮೂಲ ಉದ್ದೇಶವಾಗಿದೆ.
1.52 ಲಕ್ಷ ಸಂಬಳ ಫಿಕ್ಸ್:
ಒಳ್ಳೆಯ ಕಂಪನಿ. ಇದೆಲ್ಲಾ ಮುಗಿದ ಮೇಲೆ ನಿಮಗೆ ಸಂಬಳ ಕೈ ಸೇರೋದು ಪಕ್ಕಾ. ಯುರೋಪಿಯನ್ ಸ್ಪೇಸ್ ಏಜನ್ಸಿ ಹಾಗೂ ನಾಸಾದ ಜರ್ಮನ್ ಏರೋಸ್ಪೇಸ್ ಸೆಂಟರ್ ಜಂಟಿಯಾಗಿ ಕೃತಕ ಗುರುತ್ವಾಕರ್ಷಣದಲ್ಲಿ ಬೆಡ್ ರೆಸ್ಟ್ ಕುರಿತು ಅಧ್ಯಯನ ನಡೆಸಲು ಮುಂದಾಗಿವೆ. ಈ ಅಧ್ಯಯನದಲ್ಲಿ ಪಾಲ್ಗೊಳ್ಳುವ ವಾಲಂಟಿಯರ್ ಗಳು ಕೃತಕ ಗುರುತ್ವಾಕರ್ಷಣದಲ್ಲಿ ಸುಮಾರು ಎರಡು ತಿಂಗಳು ಹಾಸಿಗೆಯ ಮೇಲೆ ಮಲಗಿಕೊಂಡೆ ವಿಶ್ರಾಂತಿ ಪಡೆಯುತ್ತಾ ಕಾಲ ಕಳೆಯಬೇಕು. ಇದರ ಪ್ರತಿಯಾಗಿ ಪ್ರತಿಯೊಬ್ಬರಿಗೆ 18,500 (ರೂ.1,53,000) ಡಾಲರ್ ಉದ್ಯೋಗಿಗಳ ಪಾಲಾಗಲಿದೆ.
ಪ್ರಯೋಗ ಏಕೆ ?
ಬಾಹ್ಯಾಕಾಶಕ್ಕೆ ತೆರಳುವ ಯಾತ್ರಿಗಳು ಹಾಗೂ ವೈಜ್ಞಾನಿಕರು ಪ್ರಸ್ತುತ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಕೆಲಸ ಮತ್ತು ಪ್ರಯೋಗಗಳನ್ನು ಮಾಡುತ್ತಾರೆ. ಇದರಿಂದ ಶರೀರದ ಮೇಲೆ ಕೆಲ ನಕಾರಾತ್ಮಕ ಪ್ರಭಾವಗಳು ಬೀಳುತ್ತವೆ. ಹೀಗಾಗಿ ಸಂಸ್ಥೆ ಇದೆ ಮೊದಲ ಬಾರಿಗೆ ಕೃತಕ ಗುರುತ್ವಾಕರ್ಷಣೆಯ ಪ್ರಭಾವವನ್ನು ತಿಳಿಯಲು ಮತ್ತು ಪರೀಕ್ಷಿಸಲು ಬಯಸುತ್ತಿದೆ. ಈ ಪ್ರಯೋಗದ ಭಾಗವಾಗಲು 24 ರಿಂದ 55 ವರ್ಷ ವಯಸ್ಸಿನ್ನೊಳಗಿನ 12 ಪುರುಷ ಮತ್ತು 12 ಮಹಿಳಾ ಸದಸ್ಯರು ಬೇಕಾಗಿದ್ದಾರೆ. ಆದರೆ, ಅವರು ಜರ್ಮನ್ ಭಾಷೆ ತಿಳಿದವರಾಗಿರಬೇಕು.
ತಿಂಡಿ-ತಿನಿಸು ಕೂಡ ಹಾಸಿಗೆಯಲ್ಲೇ!
ಇದಕ್ಕಾಗಿ ಈ ಅಧ್ಯಯನದಲ್ಲಿ ಪಾಲ್ಗೊಳ್ಳುವ ಸದಸ್ಯರಿಗಾಗಿ ಜರ್ಮನಿಯ ಏರೋಸ್ಪೇಸ್ ಸೆಂಟರ್ ನ ಏರೋಸ್ಪೇಸ್ ಮೆಡಿಸಿನ್ ಇನ್ಸ್ಟಿಟ್ಯೂಟ್ ನಲ್ಲಿ ಈ ವಿಶೇಷ ಹಾಸಿಗೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಒರಿಯಂಟೆಷನ್ ನಿಂದ ಹಿಡಿದು ಒಟ್ಟು 89 ದಿನಗಳವರೆಗೆ ಸದಸ್ಯರು ಅಲ್ಲಿ ಕಾಲ ಕಳೆಯಬೇಕಾಗಲಿದೆ. ಇದರಲ್ಲಿ ಒಟ್ಟು 60 ದಿನಗಳ ಬೆಡ್ ರೆಸ್ಟ್ ಒಳಗೊಂಡಿದೆ. ಈ ಅವಧಿಯಲ್ಲಿ ಅವರು ತಿಂಡಿ ತಿನಿಸು ಸೇರಿದಂತೆ ತಮ್ಮ ದಿನನಿತ್ಯದ ಎಲ್ಲಾ ಕೆಲಸಗಳನ್ನು ಹಾಸಿಗೆಯಲ್ಲಿ ಮಲಗಿಕೊಂಡೆ ನಿರ್ವಹಿಸಬೇಕು ಮತ್ತು ಯಾವುದೇ ರೀತಿಯ ಅತ್ತಿತ್ತ ಕದಲಬಾರದು ಎನ್ನಲಾಗಿದೆ.