ನ್ಯೂಸ್ ನಾಟೌಟ್: ಕಳೆದ ಹದಿನೈದು ವರ್ಷಗಳಿಂದ ಸುಳ್ಯ ನಗರ ಪಂಚಾಯತ್ ನಲ್ಲಿ ಶೇಖರಣೆಗೊಂಡಿದ್ದ ಭಾರಿ ಕಸದ ರಾಶಿಗೆ ಈಗ ಮುಕ್ತಿ ಸಿಕ್ಕಿದೆ. ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದ ಕಸದ ಸಮಸ್ಯೆ ಈಗ ಹಲವು ಹರ ಸಾಹಸದ ಬಳಿಕ ಬಗೆ ಹರಿಯುವ ಹಂತದಲ್ಲಿದೆ. ಇದೀಗ ನಗರ ಪಂಚಾಯತ್ ಲೋಡುಗಟ್ಟಲೆ ಕಸವನ್ನ ಲಾರಿ ಮೂಲಕ ಬೇರೆ ಕಡೆಗೆ ವರ್ಗಾಯಿಸಿದೆ. ಇದರಿಂದ ಸುಳ್ಯದ ದೊಡ್ಡ ಸಮಸ್ಯೆಯೊಂದು ಬಗೆ ಹರಿದಂತಾಗಲಿದ್ದು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೊಂದು ತಿಂಗಳಲ್ಲಿ ಸಂಪೂರ್ಣ ಕಸ ಮೈಸೂರಿಗೆ ವರ್ಗಾವಣೆಗೊಳ್ಳಲಿದೆ.
ಸುಳ್ಯದ ನಗರ ಪಂಚಾಯತ್ ನಲ್ಲಿ ಅಂದು ಕೆಲವು ಅಧಿಕಾರಿಗಳು ಮಾಡಿದ್ದ ಬೇಜವಾಬ್ದಾರಿ ಕೆಲಸದಿಂದಾಗಿ ಕಸದ ಸಮಸ್ಯೆ ದೊಡ್ಡ ಮಟ್ಟದಲ್ಲಿ ಬೆಳೆಯುವುದಕ್ಕೆ ಕಾರಣವಾಯಿತು. ಕಸದ ಸಮಸ್ಯೆ ಮೂಲಗಳನ್ನು ಹುಡುಕಿ ಅದಕ್ಕೆ ಪರಿಹಾರ ಕಂಡು ಹಿಡಿಯುವ ಕೆಲಸವನ್ನು ನಾವು ಮಾಡಿದ್ದೇವೆ ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ನ್ಯೂಸ್ ನಾಟೌಟ್ ಗೆ ತಿಳಿಸಿದರು.
ಪಾರಂಪರಿಕ ತ್ಯಾಜ್ಯವನ್ನು ಅಳತೆ ಮಾಡಲು ಸಾಗಾಟ ಮಾಡಲು ಅದರ ಪ್ರಮಾಣವನ್ನು ಫಿಕ್ಸ್ ಮಾಡಲು ಯಾವುದೇ ಮಾನ ದಂಡಗಳಿಲ್ಲ. ಹಾಗಾಗಿ ಸುಳ್ಯ ನಗರ ಪಂಚಾಯತ್ ಪ್ರಥಮ ಬಾರಿಗೆ ಮಾನದಂಡವನ್ನು ಉಪಯೋಗ ಮಾಡಿಕೊಂಡು ಟನ್ ವೊಂದಕ್ಕೆ 3,900 ರೂ. ಟೆಂಡರ್ ಕರೆದು 9 ಲಕ್ಷ ರೂ. ವೆಚ್ಚ ಮಾಡಿ ಶೆಡ್ ನಲ್ಲಿರುವ ಸುಮಾರು 200 ಟನ್ ಕಸ ಸಾಗಾಟ ಮಾಡಿದ್ದೆವು. ಕಸವನ್ನುಅಂದಾಜು ಮಾಡಲು ಸಾಧ್ಯವಾಗದ ಕಾರಣ ಸುಮಾರು ಪ್ರಮಾಣದ ಕಸ ಹಾಗೆಯೇ ಇಲ್ಲಿ ಉಳಿದುಕೊಂಡಿತ್ತು. ಈಗ ಪ್ರಯತ್ನ ಪಟ್ಟು ಇಲ್ಲಿಂದ ಕಸವನ್ನು ವಿಲೇವಾರಿ ಮಾಡುತ್ತಿದ್ದೇವೆ. ಇನ್ನೂ ಕಸ ವಿಲೇವಾರಿ ಮಾಡುವುದಕ್ಕೆ 30 ಲಕ್ಷ ರೂ. ಬೇಕಾಗಿದೆ. ಮುಂದಿನ ಒಂದು ತಿಂಗಳಲ್ಲಿ ಸಂಪೂರ್ಣ ಕಸವನ್ನು ವಿಲೇವಾರಿ ಮಾಡುತ್ತೇವೆ ಎಂದು ತಿಳಿಸಿದರು.
ಎಲ್ಲ ನಗರದಲ್ಲಿ ಘನ ತಾಜ್ಯ ವಿಲೇವಾರಿ ಒಂದು ದೊಡ್ಡ ಸಮಸ್ಯೆ. ಸ್ಥಳದ ಅಭಾವದಿಂದ ಬೇರೆ ಕಡೆಗೆ ವರ್ಗಾಯಿಸಲು ಆಗಿರಲಿಲ್ಲ. ಆಲೆಟ್ಟಿ ಗ್ರಾಮದ ಕಲ್ಚರ್ಪೆಯಲ್ಲಿ ಮೊದಲು ಸ್ಥಳ ಕೊಟ್ಟಿದ್ದರು. ಆದರೆ ಒಂದು ಎಕರೆ ಮಾತ್ರ ನಮ್ಮ ಸುಪರ್ದಿಯಲ್ಲಿತ್ತು. ಈಗ ಎರಡು ಎಕರೆ ಮಂಜೂರಾತಿ ಹಂತದಲ್ಲಿದೆ ಎಂದು ನಗರ ಪಂಚಾಯತ್ ಮುಖ್ಯ ಅಧಿಕಾರಿ ಎಂ.ಎಚ್. ಸುಧಾಕರ್ ನ್ಯೂಸ್ ನಾಟೌಟ್ ಗೆ ತಿಳಿಸಿದರು. 1 ಎಕರೆಯಲ್ಲಿ ನಮಗೆ ಕಸವನ್ನು ಸಂಗ್ರಹಿಸುವುದಕ್ಕೆ ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ನಗರ ಪಂಚಾಯತ್ ಹತ್ತಿರ ಕಸ ಸಂಗ್ರಹಿಸುವುದಕ್ಕೆ ಆರಂಭಿಸಿದೆವು. ಈ ವೇಳೆ ಒಣ ತ್ಯಾಜ್ಯ ಹಾಗೂ ಹಸಿ ಕಸ ಒಟ್ಟಿಗೆ ಸಂಗ್ರಹಗೊಂಡವು. ಇದರಿಂದ ಶೆಡ್ ನಿಂದ ಅರ್ಧದಷ್ಟು ಕಸ ಈಗಾಗಲೇ ಹೋಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿ ಉಳಿದ ಕಸವನ್ನು ಬೇರೆ ಕಡೆಗೆ ವರ್ಗಾಯಿಸಲು ಮಾತನಾಡಲಾಗಿದೆ ಎಂದು ತಿಳಿಸಿದರು. ಅವರು ಅದನ್ನು ಅನುಮೋದಿಸಿರುವುದರಿಂದ ಕಸ ವಿಲೇವಾರಿ ಬೆಳವಣಿಗೆ ನಡೆದಿದೆ ಎಂದು ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಎಚ್. ಸುಧಾಕರ್ ತಿಳಿಸಿದರು.
ಗ್ರೀನ್ ಸ್ಪೇಸ್ ಸೊಲ್ಯುಷನ್ಸ್ ಎಂಬ ಮಂಗಳೂರಿನ ಸುರತ್ಕಲ್ ಮೂಲದ ಕಂಪನಿ ಈ ಕಸವನ್ನು ಮೈಸೂರಿನಲ್ಲಿ ವಿಲೇವಾರಿ ಮಾಡುತ್ತಿದೆ. ಒಟ್ಟು ಮೂರು ಲಾರಿಗಳಲ್ಲಿ ಕಸವನ್ನು ಸೋಮವಾರದಿಂದ ವಿಲೇವಾರಿ ಮಾಡಲಾಗಿದೆ. ಒಂದೊಂದು ಲಾರಿಗಳಲ್ಲಿ 30 ಟನ್ ಗಳಷ್ಟು ಕಸ ವಿಲೇವಾರಿ ಆಗುತ್ತಾ ಇದೆ. ಇಲ್ಲಿ ಎಷ್ಟು ಪ್ರಮಾಣದಲ್ಲಿ ಕಸ ಇನ್ನೂ ಬಾಕಿ ಇದೆ ಎನ್ನುವುದರ ಅಂದಾಜು ಸಿಗುತ್ತಿಲ್ಲಎಂದು ಎಂ.ಎಚ್. ಸುಧಾಕರ್ ತಿಳಿಸಿದರು.
ಸುಳ್ಯದ ನಗರ ಪಂಚಾಯತ್ ಕಸದ ಸಮಸ್ಯೆ ಕಳೆದ ಹಲವು ವರ್ಷಗಳಿಂದ ಜನರ ನೆಮ್ಮದಿ ಕೆಡಿಸಿತ್ತು. ಜನರು ಸಹಜವಾಗಿಯೇ ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಖ್ಯಾತ ಚಿತ್ರನಟ ಅನಿರುದ್ಧ್ ಕಾಮೆಂಟ್ ಮಾಡಿದ್ದರು. ಬೇಗ ಸುಳ್ಯದ ಕಸವನ್ನು ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದ್ದರು. ಇದು ವಿವಾದಕ್ಕೂ ಕಾರಣವಾಗಿತ್ತು.