ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸುಳ್ಯದ ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಯ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಆರೋಗ್ಯ ಭಾರತ್ -ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ (AB-PMJAY-ArK)) ಅತ್ಯುತ್ತಮ ಸೇವಾ ಪುರಸ್ಕಾರ ದೊರೆತಿದೆ.
ಗುರುವಾರ (ಜ.೨೬) ಗಣರಾಜ್ಯೋತ್ಸವ ವಿಶೇಷ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ (ರಿ) ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಹಾಗೂ ಕಾಲೇಜಿನ ಡೀನ್ ನೀಲಾಂಬಿಕೈ ನಟರಾಜನ್ ಜಿಲ್ಲಾಧಿಕಾರಿ ರವಿ ಕುಮಾರ್ ಅವರಿಂದ ಪ್ರಶಂಸನಾ ಪತ್ರ ಸ್ವೀಕರಿಸಿದರು. ಈ ವೇಳೆ ಮೆಡಿಕಲ್ ಕಾಲೇಜಿನ ರಿಜಿಸ್ಟ್ರಾರ್ ಡಾ. ಸಂದೇಶ್ ರೈ ಕುತ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ| ಕೆವಿ ಚಿದಾನಂದ ಅವರು, ನಮ್ಮ ವೈದ್ಯರು, ಸಿಬ್ಬಂದಿ ತಂಡ ಕರೋನಾದಂತಹ ತುರ್ತು ಪರಿಸ್ಥಿತಿಯ ಸಮಯದಲ್ಲಿ ನಿರಂತರವಾಗಿ ಆರೋಗ್ಯ ಸೇವೆ ನೀಡಿದ್ದರು. ತಮ್ಮ ಪ್ರಾಣದ ಹಂಗನ್ನು ತೊರೆದು ಕೆಲಸ ಮಾಡಿದ್ದರು. ಇದೆಲ್ಲದರ ಫಲವಾಗಿಯೇ ಇಂದು ಸಂಸ್ಥೆಗೆ ಇಷ್ಟು ದೊಡ್ಡ ಗೌರವ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಕಾಲೇಜಿನ ಡೀನ್ ನೀಲಾಂಬಿಕೈ ನಟರಾಜನ್ , ನಮ್ಮ ವೈದ್ಯರ ತಂಡದ ಕೆಲಸದ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಅವರೆಲ್ಲರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ ಎಂದು ತಿಳಿಸಿದರು.
ಕರೋನಾ ಸೋಂಕು ದೇಶಾದ್ಯಂತ ಕಳೆದೆರಡು ವರ್ಷ ಜನರ ಬದುಕನ್ನು ಹಿಂಡಿತ್ತು. ಜನರು ಸೋಂಕಿನ ಸುಳಿಗೆ ಸಿಲುಕಿ ನಲುಗಿ ಹೋಗಿದ್ದರು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಡಾ|
ಕೆ.ವಿ. ಚಿದಾನಂದ ನೇತೃತ್ವದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರ ತಂಡ ಶಕ್ತಿ ಮೀರಿ ಜನರಿಗೆ ಆರೋಗ್ಯ ಸೇವೆ ನೀಡಿತ್ತು. ಎಲ್ಲ ವೈದ್ಯರು, ಸಿಬ್ಬಂದಿ ಸಮಯದ ಪರಿವನ್ನು ಲೆಕ್ಕಿಸದೆ ಹಗಲಿರುಳೆನ್ನದೆ ದುಡಿದಿದ್ದರು. ಮಾತ್ರವಲ್ಲ ಆಯುಷ್ಮಾನ್ ಯೋಜನೆಯನ್ನು ಯಶಸ್ವಿಯಾಗಿ ಜನರಿಗೆ ತಲುಪಿಸಿದ ಕೀರ್ತಿ ಕೆವಿಜಿ ಮೆಡಿಕಲ್ ಕಾಲೇಜಿಗೆ ಸೇರುತ್ತದೆ. ಈ ಎಲ್ಲವನ್ನು ಗುರುತಿಸಿ ಖಾಸಗಿ ಆಸ್ಪತ್ರೆಗಳ ಪೈಕಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಈ ಗೌರವವನ್ನು ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.