ನ್ಯೂಸ್ ನಾಟೌಟ್ : ಬಹುವರ್ಷಗಳ ಬೇಡಿಕೆಯಾಗಿದ್ದ ಅರಂತೋಡು-ಎಲಿಮಲೆ ರಸ್ತೆ ಅಭಿವೃದ್ದಿ ಕಾಮಗಾರಿಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ.ಜ.೮ರಂದು ಸಚಿವ ಎಸ್.ಅಂಗಾರ ಅವರ ನೇತೃತ್ವದಲ್ಲಿ ಗುದ್ದಲಿ ಪೂಜೆ ನಡೆಯಲಿದೆ. ಮಡಿಕೇರಿ ಹಾಗೂ ಕುಕ್ಕೆ ಸುಬ್ರಹ್ಮಣ್ಯವನ್ನು ಅತೀ ಹತ್ತಿರವಾಗಿಸಬಲ್ಲ ೩ ಕೋಟಿ ವೆಚ್ಚದ ಬಹುನಿರೀಕ್ಷೆಯ ರಸ್ತೆ ಅಭಿವೃದ್ದಿ ಕಾಮಗಾರಿ ಆರಂಭಗೊಳ್ಳಲಿದೆ.
15 ವರ್ಷಗಳಿಂದ ಹೋರಾಟ:
ಈ ಕುರಿತು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹರಿಪ್ರಸಾದ್ ಎ.ಕೆ. “ಈ ರಸ್ತೆ 1996 ರಲ್ಲಿ ಡಾಮರಿಕರಣ ಆಗಿತ್ತು ,ಕಳೆದ 28 ವರ್ಷಗಳ ಹಿಂದೆ ಡಾಮರೀಕರಣ ನಂತರ ಏನೂ ಅಭಿವೃದ್ದಿ ಕಾರ್ಯ ಕೈಗೊಂಡಿಲ್ಲ. ಕಳೆದ 15 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಒಂದು ವರ್ಷದಿಂದ ಚುನಾವಣಾ ಬಹಿಷ್ಕಾರದ ಬ್ಯಾನರ್ ಹಾಕಿದ್ದೇವೆ ಆದರೂ ಯಾವುದೇ ಅಧಿಕಾರಿಗಳು ಭೇಟಿ ಮಾಡಿಲ್ಲ.ಅರಮನೆಗಯ ತೂಗು ಸೇತುವೆ ಬದಲಿಗೆ ಶಾಶ್ವತ ಸೇತುವೆಯಾಗಲು ಹಲವು ಬಾರಿ ಮನವಿ ಮಾಡಿದ್ದೇವೆ. ಕೇವಲ ಆಶ್ವಾಸನೆ ಮಾತ್ರ ನೀಡುತ್ತಿದ್ದಾರೆ. ಈ ಭಾಗದಲ್ಲಿ ಬಿಜೆಪಿ ಮತದಾರರು ಮಾತ್ರ ಹೆಚ್ಚಾಗಿದ್ದೇವೆ. ಆದರೂ ಬಿಜೆಪಿ ಈ ಭಾಗವನ್ನು ನಿರ್ಲಕ್ಷ್ಯ ಮಾಡುತ್ತಿದೆ. ಹೇಗಿದ್ದರೂ ಮತ ಬೀಳಬಹುದು ಎಂಬ ಆಲೋಚನೆ ಆಗಿರಬಹುದು. ಕೆಲವೊಮ್ಮೆ ಅದು ನಿಮ್ಮ ಭ್ರಮೆಯೂ ಆಗಿರಬಹುದು ಅಭಿವೃದ್ದಿ ಕೆಲಸ ಮಾಡಿ ಮತ ಪಡೆಯಲು ಪ್ರಯತ್ನ ಪಡಿ ಎಂದು ಹರಿಪ್ರಸಾದ್ ಅಡ್ತಲೆ ಹೇಳಿದರು.
15 ದಿನ ಕಾಯುತ್ತೇವೆ:
ಮುಂದುವರಿದು ಮಾತನಾಡಿದ ಅವರು, ಅರಂತೋಡು ನಿಂದ ಅಡ್ತಲೆವರೆಗೆ ಕಾಮಗಾರಿ ಪೂರ್ಣಗೊಳಿಸಬೇಕು. ಕನಿಷ್ಟ ಅಡ್ತಲೆವರೆಗಾದರೂ ಆಗಲೇಬೇಕು. ಗುದ್ದಲಿ ಪೂಜೆ ಆದ 15 ದಿನ ಕಾಯುತ್ತೇವೆ. ಕಾಮಗಾರಿ ಆರಂಭಗೊಳಿಸದೆ ಇದ್ದರೆ ಹಿತರಕ್ಷಣಾ ವೇದಿಕೆಯಿಂದ ಹೋರಾಟ ನಡೆಸಲಾಗುವುದು ಎಂದು ಹೇಳಿದರು.ರಸ್ತೆ ಅಭಿವೃದ್ಧಿಯಾಗದಿದ್ದರೆ ನಾಗರಿಕಾ ಹಿತರಕ್ಷಣಾ ವೇದಿಕೆಯ ಸರ್ವ ಸದಸ್ಯರು ಸೇರಿಕೊಂಡು ಅಭಿಯಾನದ ಮೂಲಕ ಪ್ರತಿಯೊಂದು ಮನೆಗಳಿಗೂ ಭೇಟಿ ಕೊಟ್ಟು ಈ ಭಾಗದಲ್ಲಿ ಯಾವುದೇ ಗುದ್ದಲಿ ಪೂಜೆಗೂ ಅವಕಾಶ ನೀಡುವುದಿಲ್ಲ ಎಂಬ ದೃಢ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇಲ್ಲವಾದಲ್ಲಿ ಯಾವುದೇ ಜನಪ್ರತಿನಿಧಿಗಳಿಗೆ ಮತಯಾಚನೆಗೆ ಈ ಊರಿಗೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎಂಬುದು ನಾಗರೀಕ ಹಿತರಕ್ಷಣಾ ವೇದಿಕೆಯವರ ನಿರ್ಧಾರವಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ರಂಜಿತ್ ಅಡ್ತಲೆ, ಹರಿಶ್ಚಂದ್ರ ಮೇಲಡ್ತಲೆ,ಮೋಹನ್ ಅಡ್ತಲೆ, ತೇಜಕುಮಾರ್ ಮೇಲಡ್ತಲೆ,ಶಶಿಕುಮಾರ್,ದುರ್ಗಾಪ್ರಸಾದ್ ಮೇಲಡ್ತಲೆ, ಸೌಮ್ಯ ಮೇಲಡ್ತಲೆ, ಶ್ಯಾಮಲ ಹರಿಪ್ರಸಾದ್,ಲತಾ ಅಡ್ತಲೆ ಮೊದಲಾದವರಿದ್ದರು.