ನ್ಯೂಸ್ ನಾಟೌಟ್: ಮಂಗಳೂರು ಮೂಲದ ರಕ್ತದ ಕ್ಯಾನ್ಸರ್ನ ಜಾಗತಿಕ ತಜ್ಞ ಡಾ| ಶಾಮ ಮಾಯಿಲಂಕೋಡಿ ಅಮೆರಿಕದ ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆ ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಹಾಸ್ಪಿಟಲ್ ನ್ಯೂಯಾರ್ಕ್ನ ರಕ್ತದ ಕ್ಯಾನ್ಸರ್ ವಿಭಾಗದಲ್ಲಿ ನಿರ್ದೇಶಕರಾಗಿ ಪದೋನ್ನತಿಗೊಂಡಿದ್ದಾರೆ.
ಬದಿಯಡ್ಕ ಸಮೀಪದ ಮಾಯಿಲಂಕೋಡಿ ಎಂ. ನಾರಾಯಣ ಭಟ್ ಹಾಗೂ ಶ್ಯಾಮಲಾ ದಂಪತಿಯ ಪುತ್ರ ಡಾ| ಶಾಮ ಮಾಯಿಲಂಕೋಡಿ ಅವರು, ದೇರಳಕಟ್ಟೆ ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಅಭ್ಯಾಸ ಮಾಡಿ, ಉನ್ನತ ಶಿಕ್ಷಣವನ್ನು ಅಮೆರಿಕದಲ್ಲಿ ಪಡೆದರು. ವಾಷಿಂಗ್ಟನ್ನಲ್ಲಿರುವ “ನ್ಯಾಶನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್’ನಲ್ಲಿ ಕ್ಯಾನ್ಸರ್ ಬಗ್ಗೆ ವಿಶೇಷ ಅಧ್ಯಯನ ಹಾಗೂ ಫೆಲೋಶಿಪ್ ಮಾಡಿದರು. ಬಳಿಕ ರಕ್ತದ ಕ್ಯಾನ್ಸರ್ ತಜ್ಞರಾಗಿ ಅಮೆರಿಕದಲ್ಲಿ ಸೇವೆ ಸಲ್ಲಿಸಿದರು.
ರಕ್ತದ ಕ್ಯಾನ್ಸರ್ ನಿವಾರಣೆಗಾಗಿ ಡಾ| ಶಾಮ ಅಭಿವೃದ್ಧಿಪಡಿಸಿದ “ಬಚ್ಚಿಟ್ಟುಕೊಂಡ ಕ್ಯಾನ್ಸರ್ ಕೋಶಗಳನ್ನು ಹುಡುಕಿ ಕೊಲ್ಲುವ ವಿನೂತನ ತಂತ್ರಜ್ಞಾನ’ವು (ಸೆಲ್ ಥೆರಪಿ)ಜಾಗತಿಕ ವೈದ್ಯಕೀಯ ಲೋಕದಲ್ಲಿ ಇತ್ತೀಚೆಗೆ ಖ್ಯಾತಿ ಪಡೆದಿತ್ತು. ಈ ಕುರಿತ ಸಂಶೋಧನ ಬರಹ ಹಾಗೂ ಸಂಪಾದಕೀಯ “ನ್ಯೂ ಇಂಗ್ಲೆಂಡ್ ಮೆಡಿಕಲ್ ಜರ್ನಲ್’ನಲ್ಲಿ ಪ್ರಕಟವಾಗಿದೆ.