ನ್ಯೂಸ್ ನಾಟೌಟ್ : 2022 ಜುಲೈ 27ರಂದು ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ನಡೆದಿತ್ತು. ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಅವರನ್ನು ಪಿಎಫ್ಐ ಕಾರ್ಯಕರ್ತರು ಹತ್ಯೆ ಮಾಡಿದ್ದರು ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು. ಈ ಪ್ರಕರಣ ಸಂಬಂಧ ರಾಜ್ಯ ಪೊಲೀಸ್ ಮತ್ತು ಎನ್ಐಎ ಅಧಿಕಾರಿಗಳ ತಂಡ ಆರೋಪಿಗಳನ್ನು ಬಂಧಿಸಿದೆ. ಇದೀಗ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಇಬ್ಬರು ಪಿ ಎಫ್ ಐ ಮುಖಂಡರಿಗಾಗಿ ಶೋಧ ಮುಂದುವರಿದಿದೆ.
ತಲಾ ಐದು ಲಕ್ಷ ಬಹುಮಾನ:
ಪ್ರವೀಣ್ ನೆಟ್ಟಾರು ರವರ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ಮುಖಂಡರನ್ನು ಪತ್ತೆಹಚ್ಚಲು ಸಹಾಯ ನೀಡುವವರಿಗೆ ರಾಷ್ಟ್ರೀಯ ತನಿಖಾದಳ(ಎನ್ಐಎ) ಪಾರಿತೋಷಕ ಘೋಷಿಸಿದೆ. ಕೊಡಾಜೆ ಮಹಮ್ಮದ್ ಷರೀಫ್ ಹಾಗೂ ನೆಕ್ಕಿಲಾಡಿ ಮಸೂದ್ಗಾಗಿ ಎನ್ಐಎ ಕಳೆದ ಕೆಲವು ತಿಂಗಳುಗಳಿಂದಲೇ ಶೋಧ ನಡೆಸುತ್ತಿದೆ. ಆದರೆ, ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಈ ಇಬ್ಬರ ಮಾಹಿತಿ ನೀಡಿದವರಿಗೆ ತಲಾ ಐದು ಲಕ್ಷ ರೂ.ಬಹುಮಾನ ಕೊಡುವುದಾಗಿ ಘೋಷಿಸಿದೆ.
ರಾಜ್ಯಾದ್ಯಂತ ವಾಂಟೆಡ್ ಪೋಸ್ಟರ್ :
ಕೊಡಾಜೆ ಮಹಮ್ಮದ್ ಷರೀಫ್ ಮತ್ತು ನೆಕ್ಕಿಲಾಡಿಯ ಮಸೂದ್ ಘಟನೆ ಬಳಿಕ ತಲೆಮರೆಸಿಕೊಂಡಿದ್ದರು. ಹೀಗಾಗಿ ಎನ್ಐಎಯಿಂದ ವಾಂಟೆಡ್ ಪೋಸ್ಟರ್ ಅಭಿಯಾನ ಶುರುವಾಗಿದೆ.ಮಹಮ್ಮದ್ ಷರೀಫ್ ಪಿಎಫ್ಐ ಸಂಘಟನೆ ಕಾರ್ಯಕಾರಣಿ ಸದಸ್ಯನಾಗಿದ್ದರೆ, ಮಸೂದ್ ಕೂಡಾ ಈ ಸಂಘಟನೆಯಲ್ಲಿದ್ದಾನೆ. ಕಳೆದ ಕೆಲ ತಿಂಗಳಿಂದ ಇವರಿಬ್ಬರಿಗಾಗಿ ತೀವ್ರ ಹುಡುಕಾಟ ನಟಡಸಿದರೂ ಪ್ರಯೋಜನವಾಗಿರಲಿಲ್ಲ.ಆರೋಪಿಗಳು ಸಿಕ್ಕಿಲ್ಲ.ಹೀಗಾಗಿ ಇಡೀ ರಾಜ್ಯಾದ್ಯಂತ ಆರೋಪಿಗಳ ಪತ್ತೆಗೆ ವಾಂಟೆಡ್ ಪೋಸ್ಟರ್ ವಿತರಣೆ ಮಾಡಲಾಗಿದೆ. ಎಲ್ಲೆಲ್ಲಿ ಪಿಎಫ್ಐ ಕಚೇರಿಗಳಿವೆಯೋ ಆ ಭಾಗದಲ್ಲಿ ಹೆಚ್ಚು ಹುಡುಕಾಟ ನಡೆಯುತ್ತಿದೆ.ಬೆಂಗಳೂರು ಸೇರಿದಂತೆ ವಿವಿಧ ಪ್ರಮುಖ ಜಿಲ್ಲೆಗಳಿಗೆ ಪೋಸ್ಟರ್ ಗಳ ರವಾನೆ ಮಾಡಲಾಗಿದೆ. ಆಯಾ ಡಿಸಿಪಿ ಕಚೇರಿ, ಎಸ್ಪಿ ಕಚೇರಿಗಳು ಎಸಿಪಿ, ಪೊಲೀಸ್ ಠಾಣಿಗಳಿಗೆ ರವಾನೆ ಮಾಡಲಾಗಿತ್ತು, ಬಸ್ ಸ್ಟಾಂಡ್ ಸೇರಿದಂತೆ ಪ್ರಮುಖ ಜಾಗಗಳಲ್ಲಿ ಇವುಗಳನ್ನು ಹಾಕುವಂತೆ ಸೂಚಿಸಲಾಗಿದೆ.