ನ್ಯೂಸ್ ನಾಟೌಟ್ : 2022 ಜುಲೈ 27ರಂದು ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ ಘಟನೆ ಬೆಳ್ಳಾರೆಯಲ್ಲಿ ನಡೆದಿತ್ತು. ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಅವರನ್ನು ಪಿಎಫ್ಐ ಕಾರ್ಯಕರ್ತರು ಹತ್ಯೆ ಮಾಡಿದ್ದರು ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು. ಪ್ರಕರಣ ಸಂಬಂಧ ರಾಜ್ಯ ಪೊಲೀಸ್ ಮತ್ತು ಎನ್ಐಎ ಅಧಿಕಾರಿಗಳ ತಂಡ ಒಟ್ಟು ಹತ್ತು ಜನ ಆರೋಪಿಗಳನ್ನು ಬಂಧನ ಮಾಡಿತ್ತು. ಈ ಪ್ರಕರಣ ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು.
ಪಾರಿತೋಷಕ ಘೋಷಣೆ:
ಇದೀಗ ಪ್ರವೀಣ್ ನೆಟ್ಟಾರು ರವರ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ನಾಲ್ವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ಕಾರ್ಯಕರ್ತರನ್ನು ಪತ್ತೆಹಚ್ಚಲು ಸಹಾಯ ನೀಡುವವರಿಗೆ ರಾಷ್ಟ್ರೀಯ ತನಿಖಾದಳ(ಎನ್ಐಎ) ಪಾರಿತೋಷಕ ಘೋಷಿಸಿದೆ.
ಘಟನೆ ನಡೆದು ೫ ತಿಂಗಳು:
ಘಟನೆ ನಡೆದು 5 ತಿಂಗಳು ಕಳೆದಿದ್ದು, ಸುಳ್ಯ ಬುದು ಹೌಸ್ನ ಎಸ್. ಮುಹಮ್ಮದ್ ಮುಸ್ತಫ ಯಾನೆ ಮುಸ್ತಫ ಪೈಚಾರ್ ಮತ್ತು ಮಡಿಕೇರಿಯ ಎಂ.ಎಚ್. ತೌಫಲ್ ಕುರಿತು ಮಾಹಿತಿ ನೀಡುವವರಿಗೆ ತಲಾ 5 ಲಕ್ಷ ರೂ. ನೀಡಲಾಗುವುದು ಎಂದು ಘೋಷಿಸಲಾಗಿದೆ. ದಕ್ಷಿಣ ಕನ್ನಡದ ಕಲ್ಲುಮುಟ್ಲು ವೀಟೆಲ್ ಎಂ.ಆರ್. ಉಮ್ಮರ್ ಫಾರೂಕ್ ಯಾನೆ ಉಮ್ಮರ್, ಸಿದ್ದಿಕ್ ಯಾನೆ ಪೈಂಟರ್ ಸಿದ್ದಿಕ್ ಯಾನೆ ಗುಜರಿ ಸಿದ್ದಿಕ್ ಕುರಿತು ಮಾಹಿತಿ ನೀಡುವವರಿಗೆ ತಲಾ 2 ಲಕ್ಷ ರೂ. ಪಾರಿತೋಷಕ ನೀಡಲಾಗುವುದು ಎಂದು ನೊಟೀಸ್ನಲ್ಲಿ ತಿಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರಿಗಾಗಿ ತೀವ್ರ ಶೋಧ ಮುಂದುವರಿದಿದೆ.ಆರೋಪಿಗಳು ಕೇರಳದಲ್ಲಿ ತಲೆಮರೆಸಿಕೊಂಡಿರುವ ಶಂಕೆಯ ಹಿನ್ನೆಲೆಯಲ್ಲಿ ನೊಟೀಸಿನ ಪ್ರತಿಗಳನ್ನು ಕಲ್ಲಿಕೋಟೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಲಗತ್ತಿಸಲಾಗಿದೆ ಎಂದು ತಿಳಿದು ಬಂದಿದೆ