ಮೂಡುಬಿದಿರೆ: ಅಯೋಧ್ಯೆಯ ರಾಮಜನ್ಮಭೂಮಿ ಹಾಗೂ ಬಾಬರಿ ಮಸೀದಿ ವಿವಾದ, ತ್ರಿವಳಿ ತಲಾಖ್ ಮತ್ತು ನೋಟ್ ಬ್ಯಾನ್ ಗೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪು ನೀಡಿದವರಲ್ಲಿ ಒಬ್ಬರಾಗಿರುವ ದಕ್ಷಿಣ ಕನ್ನಡ ಮೂಡುಬಿದಿರೆ ಮೂಲದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ನಿವೃತ್ತರಾಗಿದ್ದಾರೆ.ಅಯೋಧ್ಯೆ ಜಮೀನು ವಿವಾದದ ತೀರ್ಪು ಪ್ರಕಟಿಸಿದ್ದ ಪಂಚ ಪೀಠದ ಐವರು ನ್ಯಾಯಮೂರ್ತಿಗಳಲ್ಲಿ ಅಬ್ದುಲ್ ನಜೀರ್ ಏಕೈಕ ಮುಸ್ಲಿಮ್ ನ್ಯಾಯಮೂರ್ತಿಯಾಗಿದ್ದರು ಎನ್ನುವುದು ವಿಶೇಷ.
ಸ್ಪೂರ್ತಿಯ ಚಿಲುಮೆ:
ಮೂಡುಬಿದಿರೆ ಕಾನದವರಾಗಿರುವ ನಝೀರ್ ಅವರು ಬೆಳುವಾಯಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಬಳಿಕ ಮಹಾವೀರ ಕಾಲೇಜು ಮತ್ತು ಮಂಗಳೂರು ಎಸ್.ಡಿ.ಎಂ. ಕಾಲೇಜಿನಲ್ಲಿ ಕಾನೂನು ಪದವಿ ಪಡೆದು 1983 ರಲ್ಲಿ ಹೈಕೋರ್ಟ್ ವಕೀಲರಾಗಿ ಸೇವೆ ಸಲ್ಲಿಸಿದರು.2003ರಲ್ಲಿ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಬಳಿಕ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. 2017ರಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿ ರುವಾಗಲೇ ಸುಪ್ರೀಂ ಕೋರ್ಟ್ ಗೆ ಪದೋನ್ನತಿ ಪಡೆದರು. ನಝೀರ್ ಅವರು ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗದೇ ಉನ್ನತೀಕರಿಸಲ್ಪಟ್ಟ ಮೂರನೇ ನ್ಯಾಯಾಧೀಶರಲ್ಲಿ ಒಬ್ಬರಾಗಿದ್ದಾರೆ. ಕೆಲವು ಐತಿಹಾಸಿಕ ತೀರ್ಪುಗಳಿಂದ ದೇಶದ ಗಮನ ಸೆಳೆದಿದ್ದಾರೆ.ಇವರ ಸಾಧನೆ ಇತರರಿಗೂ ಸ್ಪೂರ್ತಿ.
ಸರಳ ವ್ಯಕ್ತಿತ್ವ:
ದೇಶದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆಗಿದ್ದರೂ, ಒಂಚೂರು ಅಹಂ ಇಲ್ಲದೇ ಎಲ್ಲರ ಜತೆ ಬೆರೆತುಕೊಳ್ಳುವ ಅತ್ಯಂತ ಸರಳ ವ್ಯಕ್ತಿತ್ವ ಇವರದು. ಕರಾವಳಿಗೆ ಬಂದಾಗಲೆಲ್ಲಾ ಸಭೆ ಸಮಾರಂಭಗಳಲ್ಲಿ ಆಪ್ತರಾಗಿ ಮಾತನಾಡುವ ಇವರು ಕನ್ನಡ, ತುಳು ಭಾಷೆಯಲ್ಲೇ ಭಾಷಣ ಮಾಡುತ್ತಾರೆ. ತಿಂಗಳಿಗೊಮ್ಮೆ ಊರಿನ ಮನೆಗೆ ಭೇಟಿ ನೀಡುತ್ತಿದ್ದರು. ಊರಿನ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು ಎಂದು ಮೂಡಬಿದಿರೆ ಜನತೆ ಅಭಿಪ್ರಾಯ ಪಡುತ್ತಾರೆ.