ನ್ಯೂಸ್ ನಾಟೌಟ್ : ಅನ್ಯಧರ್ಮೀಯರಿಗೆ ಹಿಂದೂ ಜಾತ್ರೋತ್ಸವದಲ್ಲಿ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಅನ್ನುವ ಕೂಗು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಈ ನಡುವೆ ಉಡುಪಿ ಜಿಲ್ಲೆ ಕುಂದಾಪುರ ವ್ಯಾಪ್ತಿಯ ದೇವಸ್ಥಾನದಲ್ಲೂ ಇದೇ ಕೂಗು ಕೇಳಿ ಬಂದಿದೆ.
ಹಿಂದೂ ಜಾಗರಣಾ ವೇದಿಕೆ ಶಂಕರನಾರಾಯಣ ಘಟಕದ ವತಿಯಿಂದ ಜನವರಿ 16ರಂದು ಶಂಕರ ನಾರಾಯಣದಲ್ಲಿ ನಡೆಯುವ ಜಾತ್ರೆಯಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದೆಂದು ಶಂಕನಾರಾಯಣ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೆಸರರಾದ ಲಕ್ಷ್ಮೀನಾರಾಯಣ ಉಡುಪ ಇವರಿಗೆ ಹಿಂದೂ ಜಾಗರಣ ವೇದಿಕೆ ವತಿಯಿಂದ ಮನವಿಯನ್ನು ಸಲ್ಲಿಸಲಾಗಿದೆ.
ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ಹಾಲಾಡಿ ವಲಯ ಸಂಯೋಜಕ್ ಮಾನ್ವಿತ್ ಶೆಟ್ಟಿ ಯಡಮಕ್ಕಿ, ಶಂಕರನಾರಾಯಣ ಘಟಕ ಸಂಯೋಜಕ ಸಂತೋಷ್ ದೇವಾಡಿಗ, ಉಮೇಶ್ ಶೆಟ್ಟಿ ಕಲ್ಗದ್ದೆ, ವಿಜಯ್ ಯಡಮಕ್ಕಿ, ಸುದರ್ಶನ್ ಹಾಡಿಮನೆ, ಅರುಣ್ ಪ್ರಕಾಶ್ ಬೇರ್ಕಿ, ಅಭಿಜಿತ್, ರಾಘವೇಂದ್ರ ತಲ್ಲಂಜೆ, ರಮೇಶ್ ತೋಟದ ಮನೆ, ಅಭಿಷೇಕ್ ಮತ್ತಿತರರು ಉಪಸ್ಥಿತರಿದ್ದರು.