ನ್ಯೂಸ್ ನಾಟೌಟ್:ಸುಳ್ಯ ಅಂಬಟಡ್ಕದ 33/11 ಕೆವಿ ಸಬ್ಸ್ಟೇಷನ್ ಬಳಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ವತಿಯಿಂದ ಸುಳ್ಯದಲ್ಲಿ ನಿರ್ಮಾಣವಾಗುವ ಬಹುನಿರೀಕ್ಷಿತ 110/33/11 ಕೆವಿ ವಿದ್ಯುತ್ ಸಬ್ ಸ್ಟೇಷನ್ ಮತ್ತು 110 ಕೆವಿ ಮಾಡಾವು-ಸುಳ್ಯ ವಿದ್ಯುತ್ ಪ್ರಸರಣ ಮಾರ್ಗದ ಕಾಮಗಾರಿಗೆ ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ ಸುನಿಲ್ ಕುಮಾರ್ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ವರ್ಷದ ಹಿಂದೆ ಇಂಧನ ಸಚಿವರಾಗಿ ಸುಳ್ಯಕ್ಕೆ ಬಂದಾಗ ಸುಳ್ಯದ 110 ಕೆವಿ ಸಬ್ಸ್ಟೇಷನ್ ನಿರ್ಮಾಣ ದೊಡ್ಡ ಬೇಡಿಕೆಯಾಗಿತ್ತು. ಈ ಬಗ್ಗೆ ಹಲವಾರು ಬೇಡಿಕೆಗಳು, ಟೀಕೆಗಳು ಇತ್ತು. 110 ಕೆವಿ ಸಬ್ ಸ್ಟೇಷನ್ ಮಾಡಿಯೇ ಮಾಡುತ್ತೇವೆ ಎಂದು ಅಂದು ಮಾತು ಕೊಟ್ಟಿದ್ದೆ. ಸುಳ್ಯದ ಜನತೆಗೆ ಕೊಟ್ಟ ಆ ಮಾತನ್ನು ಉಳಿಸಿಕೊಂಡಿದ್ದೇವೆ. 110 ಕೆವಿ ಸಬ್ಸ್ಟೇಷನ್ ನಿರ್ಮಾಣಕ್ಕೆ ಇದ್ದ ಎಲ್ಲ ಅಡೆತಡೆಗಳನ್ನೂ ನಿವಾರಿಸಿ, ಅರಣ್ಯ ಇಲಾಖೆಯ ಸಮಸ್ಯೆ ಪರಿಹರಿಸಿ ವಿಶ್ವಾಸದಿಂದ ಗುದ್ದಲಿ ಪೂಜೆ ನೆರವೇರಿಸಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂದರು ಮೀನುಗಾರಿಕೆ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ೨೦೦೭ರಲ್ಲಿ ಮಂಜೂರಾದ ೧೧೦ ಕೆ. ವಿ ಸಬ್ ಸ್ಟೇಷನ್ ಗೆ ಮಂಜೂರಾತಿ ಸಿಕ್ಕಿದರೂ ಅರಣ್ಯ ಇಲಾಖೆಯ ತಡೆಯಿಂದ ವಿಳಂಬವಾಯಿತು. ಪ್ರಾರಂಭದಲ್ಲಿ ೨೦ ಕೋಟಿ ಇದ್ದ ಬಜೆಟ್ ಈಗ ೪೬ ಕೋಟಿಗೇರಿದೆ. ಜನರ ಒತ್ತಡದ ಮಧ್ಯೆಯು ಹಲವಾರು ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ್ದರಿಂದ ಇಂದು ಬೇಡಿಕೆ ಈಡೇರಿದೆ ಎಂದರು.ಸುಳ್ಯದ ಜನತೆ ಮುಂದಿರಿಸಿದ ಎಲ್ಲ ಬೇಡಿಕೆಗಳನ್ನೂ ಹಂತ ಹಂತವಾಗಿ ಈಡೇರಿಸುತ್ತೇವೆ. ಅಭಿವೃದ್ಧಿ ದೃಷ್ಟಿಯಲ್ಲಿ ಜನರಿಗೆ ಯಾವುದೇ ಗೊಂದಲ, ಸಂಶಯ ಬೇಡ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ, ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಅರುಣ ಕುರುಂಜಿ, ತಹಸೀಲ್ದಾರ್ ಅನಿತಾಲಕ್ಷಿ , ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಂಜಪ್ಪ, ಮೆಸ್ಕಾಂ ಮುಖ್ಯ ಎಂಜಿನಿಯರ್ ಪುಷ್ಪಾ, ಅಧೀಕ್ಷಕ ಎಂಜಿನಿಯರ್ ಕೃಷ್ಣರಾಜ್, ಕೆಪಿಟಿಸಿಎಲ್ ಮುಖ್ಯ ಎಂಜಿನಿಯರ್ ಮಂಜುನಾಥ ಶ್ಯಾನುಭೋಗ್, ಅಧೀಕ್ಷಕ ಎಂಜಿನಿಯರ್ ಉಮೇಶ್ ಉಪಸ್ಥಿತರಿದ್ದರು.