ನ್ಯೂಸ್ ನಾಟೌಟ್: ಮಂಗಳೂರಿನ ಗರೋಡಿಯಲ್ಲಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಆಟೋ ರಿಕ್ಷಾ ಚಾಲಕ, ಉಜ್ಜೋಡಿಯ ಪುರುಷೋತ್ತಮ ಪೂಜಾರಿ ಬದುಕಿನಲ್ಲಿ ಈಗ ಬೆಳದಿಂಗಳು ಕಾಣಿಸಿಕೊಂಡಿದೆ. ಮಗಳ ಮದುವೆಗೆ ಸಿದ್ಧವಾಗಿದ್ದ ಪುರುಷೋತ್ತಮ ಪೂಜಾರಿಯವರು ಬಾಂಬ್ ಸ್ಫೋಟಕ್ಕೆ ಸಿಲುಕಿ ಆಸ್ಪತ್ರೆ ಸೇರಿದ್ದರು. ಮನೆ ರಿಪೇರಿ ಮಾಡಿಸುವ ಪ್ರಯತ್ನವೂ ಮೂಲೆ ಸೇರಿತ್ತು. ಸದ್ಯಕ್ಕೆ ಮಗಳ ಮದುವೆಯ ಕನಸನ್ನು ಕೈ ಬಿಟ್ಟಿದ್ದರು. ಆದರೆ ಇದೀಗ ಅವರ ಮನೆಯನ್ನು ‘ಗುರು ಬೆಳದಿಂಗಳು ಫೌಂಡೇಷನ್’ ವತಿಯಿಂದ ನವೀಕರಿಸಲಾಗುತ್ತಿದೆ.
‘ಪುರುಷೋತ್ತಮ ಪೂಜಾರಿ ಅವರು ಹಿರಿಯ ಮಗಳು ಮೇಘಾಗೆ ಮದುವೆ ನಿಶ್ಚಯವಾಗಿದೆ. 2023ರ ಮೇ ತಿಂಗಳಲ್ಲಿ ವಿವಾಹ ನಡೆಸಲು ಹಾಗೂ ಅದಕ್ಕೂ ಮುನ್ನ ಮನೆ ದುರಸ್ತಿಗೆ ಬಯಸಿದ್ದರು. ಅಷ್ಟರಲ್ಲೇ ಬಾಂಬ್ ಸ್ಫೋಟದಿಂದ ಅವರು ಗಾಯಗೊಂಡಿದ್ದರು. ಗುರು ಬೆಳದಿಂಗಳು ಫೌಂಡೇಷನ್ ಅಧ್ಯಕ್ಷ ಪದ್ಮರಾಜ್ ಆರ್. ಅವರು, ಇತ್ತೀಚೆಗೆ ಸಂತ್ರಸ್ತರ ಕುಟುಂಬದವರನ್ನು ಭೇಟಿಯಾಗಿದ್ದರು. ಆಗ ಕುಟುಂಬಸ್ಥರು ಮನೆಯು ಹದಗೆಟ್ಟಿರುವ ವಿಚಾರವನ್ನು ಗಮನಕ್ಕೆ ತಂದಿದ್ದರು. ಎಂಜಿನಿಯರ್ ದೀವರಾಜ್ ಜೊತೆ ಮನೆಗೆ ಇತ್ತೀಚೆಗೆ ಭೇಟಿ ನೀಡಿದ್ದ ಪದ್ಮರಾಜ್, ಕುಟುಂಬದವರ ಜೊತೆ ಸಮಾಲೋಚನೆ ನಡೆಸಿ ಮನೆಯ ನವೀಕರಣಕ್ಕೆ ಕ್ರಮ ಕೈಗೊಂಡಿದ್ದರು. ಅವರ ಜಾಗದಲ್ಲಿ ಹೊಸ ಮನೆಯನ್ನು ನಿರ್ಮಿಸಲು ಅವಕಾಶ ಇಲ್ಲ. ಹಾಗಾಗಿ ಇರುವ ಮನೆಗೆ ಹೊಸತೊಂದು ಕೊಠಡಿಯನ್ನು ಸೇರ್ಪಡೆಗೊಳಿಸಿ ವಿಶಾಲಗೊಳಿಸಲಾಗುತ್ತಿದೆ. ಚಾವಣಿಯನ್ನು ಸಂಪೂರ್ಣ ಹೊಸತಾಗಿ ನಿರ್ಮಿಸಲಾಗುತ್ತಿದೆ. ಒಟ್ಟು ರು. 5.5 ಲಕ್ಷ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.