ನ್ಯೂಸ್ ನಾಟೌಟ್: ಕನ್ನಡನಾಡು ಕಂಡು ಅಪರೂಪದ ಸಂತ, ‘ನಡೆದಾಡುವ ದೇವರು’ ಎಂದೇ ಪ್ರಸಿದ್ಧವಾಗಿದ್ದ ಆಧ್ಯಾತ್ಮಿಕ ಚಿಂತಕ ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ (82) ಮಂಗಳವಾರ ಸಂಜೆ 6.05ಕ್ಕೆ ಅಸ್ತಂಗತರಾದರು.
ಒಂದು ವಾರದಿಂದ ಸಾವು–ಬದುಕಿನ ನಡುವೆ ಹೋರಾಟ ನಡೆಸಿದ್ದ ಶ್ರೀಗಳು ಕೊನೆಗೂ ಮರಳಿ ಬಾರದ ಲೋಕಕ್ಕೆ ಪಯಣಿಸಿದರು. ಅವರ ಕೋಟ್ಯಂತರ ಭಕ್ತರು ಶೋಕಸಾಗರದಲ್ಲಿ ಮುಳುಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದೇಶ್ವರ ಶ್ರೀಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ನಡೆಸಿದ ಮನವೊಲಿಕೆ ಪ್ರಯತ್ನಕ್ಕೆ ಶ್ರೀಗಳು ಒಪ್ಪದ ಕಾರಣ ಆಶ್ರಮದಲ್ಲೇ ಬಿಎಲ್ಡಿಇ ಆಸ್ಪತ್ರೆಯ ತಜ್ಞ ವೈದ್ಯರು ಅಗತ್ಯ ಚಿಕಿತ್ಸೆ ನೀಡಿದ್ದರು.
ಎರಡು ದಿನಗಳಿಂದ ಉಸಿರಾಟಕ್ಕೆ ಆಮ್ಲಜನಕದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಮಾರು 20 ದಿನಗಳಿಂದ ಆಹಾರ ತ್ಯಜಿಸಿದ್ದ ಶ್ರೀಗಳು ಸೋಮವಾರ ಬೆಳಿಗ್ಗೆ ಸ್ವಲ್ಪ ಗಂಜಿ ಸೇವಿದ್ದರು. ಬಳಿಕ ಕ್ಷಣ, ಕ್ಷಣಕ್ಕೆ ಉಸಿರಾಟ, ನಾಡಿಬಡಿತ ಕ್ಷೀಣವಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲು ವೈದ್ಯರು, ನಾಡಿನ ವಿವಿಧ ಮಠಾಧೀಶರು, ಮಠದ ಶಿಷ್ಯರು, ಗಣ್ಯರು ಅವರ ಮನವೊಲಿಸಿದರೂ ಆಸ್ಪತ್ರೆಗೆ ಹೋಗಲು ಶ್ರೀಗಳು ನಿರಾಕರಿಸಿದ್ದರು.
ಆಶ್ರಮಕ್ಕೆ ಭಾನುವಾರ ರಾತ್ರಿ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಗೋವಿಂದ ಕಾರಜೋಳ ಅವರು ಸಹ ಉನ್ನತಮಟ್ಟದ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದಾಗಿ ಮನವಿ ಮಾಡಿದರೂ ಶ್ರೀಗಳು ಒಪ್ಪಲಿಲ್ಲ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ತಮ್ಮ ಫೋನ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿ ಶ್ರೀಗಳ ಜೊತೆ ಮಾತನಾಡಲು ಅನುವು ಮಾಡಿಕೊಟ್ಟಿದ್ದರು. ಪ್ರಧಾನಿ ಸಹ ಉನ್ನತ ಮಟ್ಟದ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರೂ ಶ್ರೀಗಳು ಕೈಮುಗಿಯುವ ಮೂಲಕ ಈ ಜೀವಕ್ಕೆ ಚಿಕಿತ್ಸೆ ಅಗತ್ಯವಿಲ್ಲ, ಸಹಜವಾಗಿ ತೆರಳಲು ಬಿಡಿ ಎಂದು ಕೈಸನ್ನೆ ಮಾಡಿದ್ದರು.
ಶ್ರೀಗಳ ಅಗಲಿಗೆ ವಿಷಯ ತಿಳಿಯುತ್ತಿರುವಂತೆ ನಾಡಿನ ವಿವಿಧ ಮಠಾಧೀಶರು, ಸಚಿವರು, ಶಾಸಕರು, ಭಕ್ತರ ದಂಡು ಆಶ್ರಮದತ್ತ ಧಾವಿಸುತ್ತಿದ್ದು, ಕಂಬನಿ ಮಿಡಿಯುತ್ತಿದ್ದಾರೆ. ಶ್ರೀಗಳ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಜನವರಿ 3ರಂದು ಬೆಳಿಗ್ಗೆ 5 ರಿಂದ ಸಂಜೆ 4ರ ವರೆಗೆ ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ಕಲ್ಪಿಸಲಾಗಿದೆ. ಬಳಿಕ ಸಂಜೆ 5ಕ್ಕೆ ಅಂತಿಮ ಯಾತ್ರೆಯು ಸೈನಿಕ ಶಾಲೆಯಿಂದ ಆರಂಭಗೊಂಡು, ಶಿವಾಜಿ ವೃತ್ತ, ಗಾಂಧಿ ಚೌಕಿ, ಸಿದ್ಧೇಶ್ವರ ಗುಡಿ ಮೂಲಕವಾಗಿ ಸಾಗಿ ಆಶ್ರಮ ತಲುಪಲಿದೆ. ಸಂಜೆ 6.5ಕ್ಕೆ ಸರ್ಕಾರದ ಸಕಲ ಗೌರವಗಳೊಂದಿಗೆ ಶ್ರೀಗಳ ಅಂತಿಮ ಸಂಸ್ಕಾರ ನಡೆಯಲಿದೆ.