ನ್ಯೂಸ್ ನಾಟೌಟ್: ಭಾರತವು ಇಂದು ಜನವರಿ 15, 2023 ರಂದು 75 ನೇ ಸೇನಾ ದಿನವನ್ನು ಆಚರಿಸುತ್ತಿದೆ. ಪ್ರತಿ ವರ್ಷ ಜನವರಿ 15 ಅನ್ನು ಭಾರತೀಯ ಸೇನಾ ದಿನವನ್ನಾಗಿ ಗುರುತಿಸಲಾಗುತ್ತಿದೆ, ಕಾರಣ ಭಾರತೀಯ ಸೇನೆಯು 1949 ರಲ್ಲಿ ಈ ದಿನದಂದು ಫೀಲ್ಡ್ ಮಾರ್ಷಲ್ ಕೋದಂಡೇರ ಎಂ. ಕರಿಯಪ್ಪ ಅವರು ಬ್ರಿಟಿಷ್ ಸೇನಾ ಮುಖ್ಯ ಅಧಿಕಾರಿ ಫ್ರಾನ್ಸಿಸ್ ರಾಯ್ ಬುತ್ಚರ್(Francis Roy Butcher) ಅವರಿಂದ ಸ್ವಾತಂತ್ರ್ಯ ನಂತರದ ಭಾರತದ ಮೊದಲ ಮುಖ್ಯ ಕಮಾಂಡರ್ ಆಗಿ ಅಧಿಕಾರ ಸ್ವೀಕರಿದರು. ಆ ನೆನಪಿಗಾಗಿ ಮತ್ತು ಆ ಗೌರವಾರ್ಥ ವಾಗಿ ಈ ದಿನವನ್ನು ಭಾರತೀಯ ಸೇನಾ ದಿನವನ್ನಾಗಿ ಆಚರಿಸಲಾಗುತ್ತದೆ.
ಈ ವರ್ಷ ದೆಹಲಿಯನ್ನು ಬಿಟ್ಟು ಬೆಂಗಳೂರಿನಲ್ಲೇ ಭಾರತೀಯ ಸೇನಾ ದಿನದ ಪರೇಡ್ ಆಯೋಜಿಸಲು ಕಾರಣವೇನು?
ಪ್ರತಿ ವರ್ಷ ಭಾರತೀಯ ಸೇನಾ ದಿನದಂದು ದೆಹಲಿಯಲ್ಲಿ ಸೇನಾ ಪರೇಡ್ ನಡೆಸಲಾಗುತ್ತಿದ್ದು, ಈ ವರ್ಷ ಕರ್ನಾಟಕದ ಬೆಂಗಳೂರಿನಲ್ಲಿ ಸೇನಾ ದಿನದ ಪರೇಡ್ ನಡೆಸಲಾಗುತ್ತಿದೆ. ಬೆಂಗಳೂರಿನ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ನ (ಎಂಇಜಿ) ರೆಜಿಮೆಂಟಲ್ ಸೆಂಟರ್ನಲ್ಲಿ ಪರೇಡ್ ನಡೆಯುತ್ತಿದೆ. ಭಾರತೀಯ ಸೇನೆಯು ದೇಶದ ಜನರನ್ನು ಸಂಪರ್ಕಿಸಲು ಮತ್ತು ಜನರಿಗೆ ಸೇನಾದಿನದ ಅರಿವು ಮೂಡಿಸುವ ಉದ್ದೇಶದಿಂದ ದೆಹಲಿಯ ಹೊರಗೆ ಅಂದರೆ ನಮ್ಮ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಸೇನಾ ದಿನದ ಪರೇಡ್ ಮತ್ತು ಇತರ ಸಂಬಂಧಿತ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಯಾವೆಲ್ಲಾ ಸೇನಾ ದಳಗಳು ಭಾಗವಹಿಸಲಿವೆ:
ಸೇನಾ ದಿನದ ಪರೇಡ್ನಲ್ಲಿ ಮದ್ರಾಸ್ ಮತ್ತು ಮಹಾರ್ ರೆಜಿಮೆಂಟ್ಗಳು ಸೇರಿದಂತೆ 5 ರೆಜಿಮೆಂಟ್ಗಳು ಮತ್ತು ಮಿಲಿಟರಿ ಬ್ಯಾಂಡ್ಗಳ ತಂಡವು ಪಥಸಂಚಲನ ನಡೆಸಲಿದೆ. ಭಾರತೀಯ ಸೇನಾ ದಿನದ ಪರೇಡ್ನಲ್ಲಿ ಮದ್ರಾಸ್ ರೆಜಿಮೆಂಟ್, ಆರ್ಟಿಲರಿ ರೆಜಿಮೆಂಟ್ (ಯುದ್ಧ ಟ್ಯಾಂಕ್ ಗಳ ಸೇನಾ ತಂಡದ ಪ್ರದರ್ಶನ), ಪ್ಯಾರಾ ಎಸ್ಎಫ್, ಬಾಂಬೆ ಇಂಜಿನಿಯರ್ ಗೌಪ್, ಮಹಾರ್ ರೆಜಿಮೆಂಟ್, ಎಂಇಜಿ, ಆರ್ಮಿ ಸರ್ವೀಸ್ ಕಾರ್ಪ್ಸ್ನ ಅಶ್ವದಳದ ತುಕಡಿ ಮತ್ತು ಮಿಲಿಟರಿ ಬ್ಯಾಂಡ್ನ ತುಕಡಿಗಳು ಈ ಮೆರವಣಿಗೆಯಲ್ಲಿ ಸಾಗಲಿವೆ. ಮೆರವಣಿಗೆಯು 5 ರೆಜಿಮೆಂಟಲ್ ಬ್ರಾಸ್ ಬ್ಯಾಂಡ್ (ಸೇನಾ ವಾದ್ಯ ತಂಡ)ಗಳನ್ನು ಒಳಗೊಂಡಿರುತ್ತದೆ ಮತ್ತು ಸಂಪೂರ್ಣ ತಂಡವು 3 ಅಧಿಕಾರಿಗಳು ಮತ್ತು 57 ಇತರ ಶ್ರೇಣಿಗಳನ್ನು ಒಳಗೊಂಡಿರುತ್ತದೆ.
75,000 ಸಸಿಗಳನ್ನು ನೆಡುವ ಅಭಿಯಾನ:
ಆರ್ಮಿ ಚೀಫ್ ಜನರಲ್ ಮನೋಜ್ ಪಾಂಡೆ ಅವರು ಬೆಂಗಳೂರಿನಲ್ಲಿ ಭಾರತೀಯ ಸೇನಾ ದಿನಾಚರಣೆ 2023 ರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ಹುತಾತ್ಮರ ಗೌರವಾರ್ಥ ಪುಷ್ಪಾರ್ಚನೆ ಮಾಡಲಿದ್ದಾರೆ. ದಕ್ಷಣ ಕಮಾಂಡ್ ನೇತ್ರತ್ವದಲ್ಲಿ, 2023 ರ ಭಾರತೀಯ ಸೇನಾ ದಿನಾಚರಣೆಯ ಸಂದರ್ಭದಲ್ಲಿ ಹಸಿರು ಭಾರತಕ್ಕಾಗಿ ಪರಿಸರ ಸಂರಕ್ಷಣೆ ಉದ್ದೇಶದಿಂದ 75,000 ಸಸಿಗಳನ್ನು ನೆಡಲಾಗುತ್ತದೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ.