ನ್ಯೂಸ್ ನಾಟೌಟ್ : ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ವೇಣೂರು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಇವರು ನಾರಾವಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಬಡಗಕಾರಂದೂರು ಗ್ರಾಮದ ನಡಾಯಿ ಬಳಿ ಓಮ್ನಿಯಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದರು. ಕರಾಯ ಗ್ರಾಮದ ತೌಸೀಫ್, ಇರ್ಫಾನ್,ಅನಾಸ್, ಪುತ್ತಿಲ ಗ್ರಾಮದ ಉಸ್ಮಾನ್ ಹಾಗೂ ಪುತ್ತೂರಿನ ಇಕ್ಬಾಲ್ ಆರೋಪಿಗಳು.
೫ ಜಾನುವಾರುಗಳ ರಕ್ಷಣೆ:
ಜ.3ರ ಮಧ್ಯರಾತ್ರಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಸವಾರರನ್ನು ತಡೆದು ಪೊಲೀಸರು ತಪಾಸಣೆ ನಡೆಸಿದರು. ಈ ವೇಳೆ ಅಕ್ರಮ ಗೋಸಾಟಕ್ಕೆ ಬೆಂಗವಲಾಗಿ ಹೋಗುತ್ತಿರುವುದು ಗೊತ್ತಾಗಿದೆ.
ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾದರು. ಅದೇ ಹೆದ್ದಾರಿಯಲ್ಲಿ ಬಂದ ಓಮ್ನಿಯನ್ನು ತಡೆದು ಪರಿಶೀಲನೆ ನಡೆಸಿದರು. ಈ ಸಂದರ್ಭ ಗೋವುಗಳನ್ನು ಹಿಂಸಾತ್ಮಕವಾಗಿ ಕೈಕಾಲು ಕಟ್ಟಿ ಸಾಗಾಟ ಮಾಡಲಾಗುತ್ತಿತ್ತು. ಇದರಲ್ಲಿ 5 ಜಾನುವಾರುಗಳಿದ್ದು, ಅವುಗಳನ್ನು ರಕ್ಷಿಸಿ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ ಓಮ್ನಿ ಮತ್ತು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.