ನ್ಯೂಸ್ ನಾಟೌಟ್: ಮುಂಬರುವ ವಿಧಾನ ಸಭಾ ಚುನಾವಣಾ ಕಣ ಆರಂಭಕ್ಕೂ ಮೊದಲೇ ರಂಗೇರಿದೆ. ಅದರಲ್ಲೂ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದತ್ತ ಎಲ್ಲರ ಚಿತ್ತ ನೆಟ್ಟಿದೆ.
ಒಂದು ಕಡೆ ಪ್ರಬಲ ಹಿಂದುತ್ವದ ಕೋಟೆ. ಇನ್ನೊಂದು ಕಡೆ ಗೆಲ್ಲಲೇಬೇಕು ಎನ್ನುವ ಛಲದಲ್ಲಿರುವ ಕಾಂಗ್ರೆಸ್. ಹರೀಶ್ ಪೂಂಜಾ ಹಿಂದುತ್ವದ ಪರ ಭಾಷಣದಿಂದ ಗಮನ ಸೆಳೆದರೆ ಕಾಂಗ್ರೆಸ್ ಪಕ್ಷವು ಇತ್ತ ಬಿಜೆಪಿ ಬೆಳ್ತಂಗಡಿಯಲ್ಲಿ ಮಾಡಿರುವ ಭ್ರಷ್ಟಾಚಾರದ ದೊಡ್ಡ ಪಟ್ಟಿಯನ್ನೇ ಇಟ್ಟುಕೊಂಡು ಚುನಾವಣೆ ಎದುರಿಸುವುದಕ್ಕೆ ಮುಂದಾಗಿದೆ. ಸದ್ಯ ಬೆಳ್ತಂಗಡಿಯಲ್ಲಿ ತೆರೆಮರೆಯ ಹಿಂದೆ ಚುನಾವಣಾ ಕಾವು ಬಿರುಸಾಗಿದೆ. ಈ ಸಂದರ್ಭದಲ್ಲಿ ನ್ಯೂಸ್ ನಾಟೌಟ್ ಜತೆಗೆ “ಮತ ಬೇಟೆ” ವಿಶೇಷ ಸಂದರ್ಶನದಲ್ಲಿ ಕೆಪಿಸಿಸಿ ಬೆಳ್ತಂಗಡಿ ಉಸ್ತುವಾರಿ ಹಾಗೂ ಮಾಧ್ಯಮ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಮಾತನಾಡಿದ್ದಾರೆ. ತಮ್ಮ ಪ್ರತಿ ಮಾತಿನಲ್ಲೂ ಬೆಳ್ತಂಗಡಿ ಹಾಲಿ ಶಾಸಕ ಹರೀಶ್ ಪೂಂಜಾ ಕಾರ್ಯವೈಖರಿಯನ್ನು ಖಂಡಿಸಿದ್ದಾರೆ. ಈ ಸಲ ಬೆಳ್ತಂಗಡಿಯಲ್ಲಿ ಬಿಜೆಪಿ ಸೋಲುವುದು ಶತ ಸಿದ್ಧ ಎಂದು ಶಹೀದ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ಪಕ್ಷ ಎಷ್ಟು ಬಲಿಷ್ಠವಾಗಿದೆ ಅನ್ನುವುದನ್ನು ಕೂಡ ಶಾಹಿದ್ ವಿವರಿಸಿದ್ದಾರೆ. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ ಓದಿ.
- ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಳ್ತಂಗಡಿಯಲ್ಲಿ ಗೆಲ್ಲುವುದಿಲ್ಲ ಅಂತಾರೆ? ನೀವೇನು ಹೇಳ್ತಿರಿ?
ಸೋಲುವ ಭಯದಲ್ಲಿ ಕೆಲವರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅವರ ಸೋಲು ಅವರಿಗೆ ಖಚಿತವಾಗಿರುವುದರಿಂದ ಇಂತಹ ಬಾಲಿಶ ಹೇಳಿಕೆ ಕೊಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷದ ಗೆಲುವಿಗೆ ಯಾವುದೇ ಅಡ್ಡಿ ಆಗುವುದಿಲ್ಲ.
- ಹಾಲಿ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ ಅನ್ನುವುದನ್ನು ನೀವು ಒಪ್ಪುತ್ತೀರಾ?
ಹರೀಶ್ ಪೂಂಜಾ ಜನರಿಗೆ ಒಳ್ಳೆಯದನ್ನು ಏನು ಮಾಡಿಲ್ಲ. ಯುವಕರನ್ನು ಧರ್ಮದ ಪರ ಎತ್ತಿಕಟ್ಟಿರುವುದೇ ಅವರ ದೊಡ್ಡ ಸಾಧನೆಯಾಗಿದೆ. ಅವರ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಕಮೀಷನ್ ದಂಧೆ ಮಾಡಿದ್ದಾರೆ. ಮತ್ತೊಂದು ಧರ್ಮವನ್ನು ದ್ವೇಷಿಸುವುದನ್ನೂ ಚೆನ್ನಾಗಿ ಕಲಿಸಿಕೊಟ್ಟಿದ್ದಾರೆ. ಬೆಳ್ತಂಗಡಿಯ ಹೆಚ್ಚಿನ ಯುವಕರು ಅವರೊಂದಿಗೆ ಸೇರಿ ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಮುಸ್ಲಿಂಮರಿಗೆ ಕಡಿಯಿರಿ, ಬಡಿಯಿರಿ ಅನ್ನುವುದು ಒಂದನ್ನು ಬಿಟ್ಟು ಶಾಲೆ, ಆಸ್ಪತ್ರೆ, ಕೈಗಾರಿಕಾ ವಲಯ ನಿರ್ಮಾಣ ಮಾಡಿ ಜನರಿಗೆ ಉದ್ಯೋಗ ನೀಡುವುದರ ಕುರಿತು ಪೂಂಜಾರಿಗೆ ಆಸಕ್ತಿ ಇದ್ದಂತಿಲ್ಲ.
- ಕಾಂಗ್ರೆಸ್ ಬೆಳ್ತಂಗಡಿ ಚುನಾವಣೆಗೆ ಎಷ್ಟರ ಮಟ್ಟಿಗೆ ಸಿದ್ಧತೆ ನಡೆಸಿದೆ? ಕಣಕ್ಕಿಳಿಯುವ ಅಭ್ಯರ್ಥಿ ಯಾರು?
ಕಾಂಗ್ರೆಸ್ ನಿಂದ ಯಾರು ಅಂತಿಮವಾಗಿ ಕಣಕ್ಕೆ ಇಳಿಯುತ್ತಾರೆ ಅನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ನಮ್ಮಲ್ಲಿ ಅಭ್ಯರ್ಥಿಯ ಆಯ್ಕೆಗಾಗಿ ತ್ರಿಕೋನ ಸ್ಪರ್ಧೆ ಇದೆ. ಮಾಜಿ ಶಾಸಕ ವಸಂತ ಬಂಗೇರ, ರಕ್ಷಿತ್ ಶಿವರಾಮ್ ಹಾಗೂ ಗಂಗಾಧರ್ ಗೌಡರಲ್ಲಿ ಒಬ್ಬರು ಕಣಕ್ಕೆ ಇಳಿಯಬಹುದು. ಜಾತಿ ಸಮೀಕರಣ ನಡೆಸಿಕೊಂಡು ಪಕ್ಷ ಅವರಿಗೆ ಟಿಕೇಟ್ ನೀಡುವುದರ ಕಡೆಗೆ ಗಮನ ವಹಿಸುತ್ತದೆ. ಯುವಕರಿಗೆ ಮೊದಲ ಆದ್ಯತೆ ನೀಡುವ ಸಾಧ್ಯತೆ ಹೆಚ್ಚಿದೆ. ಬೆಳ್ತಂಗಡಿ ಜನರು ಬದಲಾವಣೆ ಬಯಸುತ್ತಿದ್ದಾರೆ.
- ನೀವು ಚುನಾವಣಾ ಜವಾಬ್ದಾರಿ ವಹಿಸಿಕೊಂಡ ಎರಡು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆದ್ದಿದೆ, ಈ ಸಲ ಗೆದ್ದು ಏನಾದರೂ ಹ್ಯಾಟ್ರಿಕ್ ಸಾಧಿಸುವ ಉದ್ದೇಶವಿದೆಯೇ?
ನನ್ನ ಸರ್ವಿಸ್ನಲ್ಲಿ ನಾನು ಪಕ್ಷಕ್ಕಾಗಿ ತೆಗೆದುಕೊಂಡ ಜವಾಬ್ದಾರಿಯನ್ನು ದೊಡ್ಡ ಮಟ್ಟದಲ್ಲಿ ನಿರ್ವಹಿಸಿ ಯಶಸ್ವಿಯಾಗಿದ್ದೇನೆ. ಹಿಂದಿನ ಚುನಾವಣೆಯಲ್ಲಿ ಹಿರೆಕೆರೂರಿನಲ್ಲಿ ಬಿ.ಸಿ ಪಾಟೀಲ್ ಅವರ ಪರವಾಗಿ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಿದ್ದೆ. ಅಲ್ಲಿ ಬಿ.ಸಿ ಪಾಟೀಲ್ ಜಯಿಸಿದ್ದರು. ಇನ್ನು ಹಾವೇರಿಯ ಬ್ಯಾಡಗಿಯಲ್ಲಿ ಸಲೀಂ ಅಹ್ಮದ್ ಅವರನ್ನು ಗೆಲ್ಲಿಸಿಕೊಟ್ಟಿದ್ದೇನೆ. ಈಗ ನನ್ನ ಮುಂದಿರುವುದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ. ಹೈಕಮಾಂಡ್ ನಿರ್ಧರಿಸಿದ ಯಾವುದೇ ವ್ಯಕ್ತಿ ಕಣಕ್ಕೆ ಇಳಿದರೂ ಅವರ ಗೆಲುವಿಗೆ ಅಗತ್ಯವಾಗಿರುವ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ. ಸಹಜವಾಗಿಯೇ ಈ ಸಲ ಗೆದ್ದು ಹ್ಯಾಟ್ರಿಕ್ ಸಾಧಿಸುವ ಗುರಿ ಅಂತೂ ಖಂಡಿತ ಇದೆ.