ನ್ಯೂಸ್ ನಾಟೌಟ್ : ಸುಳ್ಯದಲ್ಲಿ ನಡೆದ ದ. ಕ. ಜಿಲ್ಲಾ ಮಟ್ಟದ ಯುವಜನ ಮೇಳ ಮೆರವಣಿಗೆಯಲ್ಲಿ ಸ್ಪಂದನ ಗೆಳೆಯರ ಬಳಗಕ್ಕೆ ಪ್ರಥಮ ಸ್ಥಾನ ಲಭಿಸಿದೆ. ಯುವಜನ ಮೇಳ 2022-23ರ ವರ್ಣರಂಜಿತ ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯೊಂದಿಗೆ ಭಾಗವಹಿಸಿ ಪ್ರಥಮ ಸ್ಥಾನವನ್ನು ಸ್ಪಂದನ ಗೆಳೆಯರ ಬಳಗ (ರಿ.) ಅಡ್ತಲೆ ಪಡೆದುಕೊಂಡಿತು. ಇಂದು ಬೆಳಗ್ಗೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಮೆರವಣಿಗೆಗೆ ಚಾಲನೆ ನೀಡಿದ್ದರು.
ಮೆರವಣಿಗೆಗೆ ಬಹುಮಾನ:
ಮೆರವಣಿಗೆಯಲ್ಲಿ ಸಮವಸ್ತ್ರ , ಶಿಸ್ತುಬದ್ಧ ಹಾಗೂ ಅತೀ ಹೆಚ್ಚು ಸದಸ್ಯರು ಭಾಗವಹಿಸುವ ಯುವಕ ಮಂಡಲಕ್ಕೆ ಬಹುಮಾನ ನೀಡಲಾಗುತ್ತದೆ ಎಂದು ಘೋಷಿಸಲಾಗಿತ್ತು. ಪ್ರಥಮ ೩೦೦೦ , ದ್ವಿತೀಯ ೨೦೦೦ ಹಾಗೂ ತೃತೀಯ ೧೦೦೦ ನಗದು ಹಾಗೂ ಶಾಶ್ವತ ಫಲಕ ನೀಡಿ ಗೌರವವನ್ನು ನೀಡಲಾಗುತ್ತಿದೆ ಎಂದು ಹೇಳಲಾಗಿತ್ತು.ಅದರಂತೆ ಇಂದು ಸ್ಪಂದನ ಗೆಳೆಯರ ಬಳಗ ಪ್ರಥಮ ಸ್ಥಾನ ಪಡೆದು ಗೌರವಕ್ಕೆ ಪಾತ್ರವಾಯಿತು.
ಕಣ್ಮನ ಸೆಳೆಯುತ್ತಿರುವ ವೈಭವ:
ದ.ಕ ಜಿಲ್ಲಾ ಯುವ ಜನ ಮೇಳ ಸಂಭ್ರಮದಿಂದ ನಡೆಯುತ್ತಿದ್ದು,ಸಾಂಸ್ಕೃತಿಕ ಸ್ಪರ್ಧೆಗಳ ಜತೆಯಲ್ಲಿ ವಸ್ತು ಪ್ರದರ್ಶನ,ಆಹಾರ ಮೇಳ,ಸಾಂಸ್ಕೃತಿಕ ವೈಭವವೂ ಕಣ್ಮನ ಸೆಳೆಯುತ್ತಿದೆ.ದ.ಕ ಜಿಲ್ಲಾ ಯುವ ಜನ ಮೇಳ ೨೦೨೨-೨೦೨೩ ಪ್ರಯುಕ್ತ ನಡೆದ ಮೆರವಣಿಗೆಗೆ ಇಂದು ಬೆಳಗ್ಗೆ ಅದ್ದೂರಿ ಚಾಲನೆ ನೀಡಲಾಗಿತ್ತು. ಬೆಳಗ್ಗೆ ೧೦.೩೦ಕ್ಕೆ ಸುಳ್ಯ ಜ್ಯೋತಿ ಸರ್ಕಲ್ ಬಳಿಯಿಂದ ಮೆರವಣಿಗೆ ಆರಂಭಗೊಂಡಿತ್ತು.
ಉದ್ಘಾಟನಾ ಸಮಾರಂಭ:
ಇಂದು ಸಂಜೆ ಉದ್ಘಾಟನೆ ಕಾರ್ಯಕ್ರಮ ನಡೆದಿದ್ದು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ವಿ. ಉದ್ಘಾಟನೆ ನೆರವೇರಿಸಿದರು.ಸಚಿವ ಎಸ್.ಅಂಗಾರ ಅಧ್ಯಕ್ಷತೆ ವಹಿಸಿದ್ದರು.ಸಂಸದ ನಳೀನ್ ಕುಮಾರ್ ಕಟೀಲ್ , ಸಚಿವ ಕೋಟ ಶ್ರೀನಿವಾಸ್ ಪೂಜಾರಿ , ರಾಜ್ಯ ಸಭಾ ಸದಸ್ಯರಾದ ಡಾ|ಡಿ.ವೀರೇಂದ್ರ ಹೆಗ್ಗಡೆ ಸಹಿತ ಹಲವು ಮಂದಿ ಗಣ್ಯರು ಭಾಗವಹಿಸಿದರು.