ನ್ಯೂಸ್ ನಾಟೌಟ್ : ತುಳುನಾಡಿನ ಜನರ ಆರಾಧ್ಯ ದೈವ ಸ್ವಾಮಿ ಕೊರಗಜ್ಜನ ಕಾರ್ಣಿಕದ ಶಕ್ತಿ ಅಪಾರ. ಅಜ್ಜ ಎಂದು ಕರೆದರೆ ಸಾಕು ಸಮಸ್ಯೆಗಳನ್ನು ದೂರ ಮಾಡುತ್ತಾರೆ ಎನ್ನುವ ನಂಬಿಕೆ ಭಕ್ತರದ್ದು. ಕರಾವಳಿ ಮಾತ್ರವಲ್ಲ ರಾಜ್ಯ, ದೇಶ ಈಗ ವಿದೇಶದಲ್ಲೂ ಅಜ್ಜನ ಕಾರ್ಣಿಕದ ಶಕ್ತಿ ಬೆಳಗಿದೆ. ಅಜ್ಜನ ಸನ್ನಿಧಾನಕ್ಕೆ ಭಕ್ತರು ಓಡೋಡಿ ಬರುತ್ತಿದ್ದಾರೆ. ತಮ್ಮ ಸಮಸ್ಯೆಗಳಿಗೊಂದು ಮುಕ್ತಿಯ ಮಾರ್ಗ ಕಂಡುಕೊಂಡು ಅಜ್ಜನಿಗೆ ಪ್ರಿಯವಾದ ಹರಕೆ ಸಲ್ಲಿಸುತ್ತಿದ್ದಾರೆ.ಇದೀಗ ಬಿಗ್ ಬಾಸ್ ಸೀಸನ್ ೯ರ ವಿನ್ನರ್ ರೂಪೇಶ್ ಶೆಟ್ಟಿ ಕೂಡ ನನ್ನ ಗೆಲುವಿಗೆ ಕಾರಣ ಸ್ವಾಮಿಕೊರಗಜ್ಜ ಎಂದಿರುವುದು ಅಜ್ಜನ ಕಾರ್ಣಿಕದ ಶಕ್ತಿ ತುಳುನಾಡಿನಲ್ಲಿ ಮತ್ತೊಮ್ಮೆ ಸಾಬೀತಾಗಿರುವುದಕ್ಕೆ ಉದಾಹರಣೆಯಾಗಿದ್ದಾರೆ.
ಸಿನಿಮಾದಲ್ಲಿ ನಟಿಸಲು ಆಫರ್:
ಬರಿ ತುಳುನಾಡಿನಲ್ಲಷ್ಟೇ ಸೀಮಿತವಾಗಿದ್ದ ರೂಪೇಶ್ ಶೆಟ್ಟಿ ಬಿಗ್ ಬಾಸ್ ಶೋದಿಂದಾಗಿ ಇಡೀ ಕರುನಾಡಿಗೆ ಸಖತ್ ಜನಪ್ರಿಯತೆ ಗಳಿಸಿಕೊಂಡಿದ್ದಾರೆ.ಇದೀಗ ತುಳುನಾಡಿನಲ್ಲಿ ಅನೇಕ ಸನ್ಮಾನಗಳಿಗೂ ಪಾತ್ರರಾಗುತ್ತಿದ್ದಾರೆ.ಸಿನಿಮಾಗಳಲ್ಲಿಯೂ ನಟಿಸುವ ಆಫರ್ ಗಳು ಕೈ ಬೀಸಿ ಕರೆಯುತ್ತಿದೆ. ಈ ಹಿಂದೆ ತುಳು ಹಾಗೂ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ರೂಪೇಶ್ ‘ಗಿರಿಗಿಟ್’ ಚಿತ್ರದ ಮೂಲಕ ಸೂಪರ್ ಸಕ್ಸಸನ್ನು ಕಂಡಿದ್ದರು. ಈ ಮೂಲಕ ರೂಪೇಶ್ ಶೆಟ್ಟಿಗೆ ಬಿಗ್ ಬಾಸ್ಗೆ ಬರಲು ಅವಕಾಶ ಕೂಡ ಸಿಕ್ಕಿತ್ತು. ಒಟಿಟಿ ಮತ್ತು ಟಿವಿ ಬಿಗ್ಬಾಸ್ ಎರಡರಲ್ಲೂ ಸ್ಟ್ರಾಂಗ್ ಸ್ಪರ್ಧಿಯಾಗಿ ರೂಪೇಶ್ ಶೆಟ್ಟಿ ಗುರುತಿಸಿಕೊಂಡಿದ್ದರು.
ರೂಪೇಶ್ ಗೆ ಅಜ್ಜನ ಆಶೀರ್ವಾದ:
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ರೂಪೇಶ್ ಶೆಟ್ಟಿಯವರು ನನ್ನ ಗೆಲುವಿಗೆ ಕಾರಣ,ತುಳುನಾಡಿನ ಆರಾಧ್ಯ ದೈವ ಸ್ವಾಮಿ ಕೊರಗಜ್ಜ ಎಂದಿದ್ದಾರೆ.ಮಂಗಳೂರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕ ಬಳಿಕ ಅವರು ಕೊರಗಜ್ಜನ ಆಶೀರ್ವಾದ ಪಡೆದರು. “ನಾನು ಕೂರಗಜ್ಜನ ಭಕ್ತ. ಬಿಗ್ಬಾಸ್ ಮನೆಯಲ್ಲಿ ಇದ್ದ ಎಲ್ಲಾ ಟಾಸ್ಕ್ ಸೇರಿದಂತೆ ಇಡೀ ಸೀಸನ್ ಗೆಲ್ಲಲು ಕೊರಗಜ್ಜನ ಆಶೀರ್ವಾದವೇ ಕಾರಣ” ಎಂದಿದ್ದಾರೆ.
“ನಾನೊಬ್ಬ ತುಳುವ”
ರೂಪೇಶ್ ಗೆಲುವಿನ ಬಳಿಕ ಮೊದಲ ಬಾರಿ ಮಂಗಳೂರಿಗೆ ಆಗಮಿಸಿದ್ದು, ನಹರೂ ಮೈದಾನದಿಂದ ಕುತ್ತಾರಿನ ಕೊರಗಜ್ಜನ ಕ್ಷೇತ್ರದವರೆಗೆ ವಿಜಯ ಯಾತ್ರೆ ನಡೆಯಿತು. ಮಾಧ್ಯಮದವರ ಜತೆ ಮಾತನಾಡಿದ ಅವರು, ನಾನೊಬ್ಬ ತುಳುವ. ನನ್ನ ಬಿಗ್ಬಾಸ್ ಯಾನಕ್ಕೆ ತುಳುನಾಡಿಗರು ಸೇರಿದಂತೆ ರಾಜ್ಯದ ಜನತೆ ಪ್ರೀತಿ ತೋರಿಸಿದ್ದಾರೆ ಎಂದರು. ಬಿಗ್ಬಾಸ್ ಮನೆಯಲ್ಲಿ ತುಳುನಾಡಿನ ಸಂಸ್ಕೃತಿ ಹುಲಿವೇಷವನ್ನು ಪ್ರದರ್ಶಿಸಲು ಅವಕಾಶ ನೀಡಿದ್ದು ತುಂಬಾ ಖುಷಿ ಯಾಯಿತು. ಇದು ಪ್ರತಿ ಅಭಿಮಾನಿಯ ಗೆಲುವು ಎಂದು ಹೇಳಿದ್ದಾರೆ.