ನ್ಯೂಸ್ ನಾಟೌಟ್: ಮದ್ಯ ಕುಡಿಯುವುದು ತಪ್ಪಲ್ಲ ಬಿಡಿ. ಅದು ಅವರವರ ಹವ್ಯಾಸಗಳಿಗೆ ಬಿಟ್ಟಿದ್ದು. ಆದರೆ ಮದ್ಯದ ನಶೆಯಲ್ಲಿ ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದೇ ಆಗುತ್ತದೆ ಅನ್ನುವುದಕ್ಕೆ ಇಲ್ಲೊಂದು ಪ್ರತ್ಯಕ್ಷ ಉದಾಹರಣೆಯನ್ನು ಕಾಣಬಹುದಾಗಿದೆ. ಅತಿಯಾಗಿ ಕುಡಿದ ವ್ಯಕ್ತಿಯೊಬ್ಬ ಮಹಿಳಾ ಸಹ ಪ್ರಯಾಣಿಕರೊಬ್ಬರ ಮೇಲೆ ಏರ್ ಇಂಡಿಯಾ ವಿಮಾನದೊಳಗೆ ಮೂತ್ರ ವಿಸರ್ಜಿಸಿದ್ದಾನೆ. ಈ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ.
ನವೆಂಬರ್ 26 ರಂದು ಅಮೆರಿಕದ ನ್ಯೂಯಾರ್ಕ್ ನಿಂದ ದಿಲ್ಲಿಗೆ ಹೊರಟ ಏರ್ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್ ಸೀಟ್ನಲ್ಲಿ ಕುಡುಕ ಪ್ರಯಾಣಿಕನೊಬ್ಬ ತನ್ನ ಸಮೀಪದಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕೆಯ ಮೇಲೆ ಮೂತ್ರ ವಿಸರ್ಜಿಸಿದ್ದಾನೆ. ಮಹಿಳೆಯ ಬಟ್ಟೆ, ಬ್ಯಾಗು, ಶೂ ಮೂತ್ರದಿಂದ ಒದ್ದೆಯಾಗಿದೆ. ಆಕೆ ತಕ್ಷಣ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಅವರು ಮಹಿಳೆಗೆ ಹೊಸ ಬಟ್ಟೆ, ಚಪ್ಪಲಿ ನೀಡಿ ಸಮಾಧಾನ ಪಡಿಸಿ ಆಕೆಯನ್ನು ವಾಪಸ್ ಸೀಟಿನಲ್ಲಿ ಕೂರಿಸುತ್ತಾರೆ. ನ್ಯೂಯಾರ್ಕ್ ನಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನ ದಿಲ್ಲಿಯಲ್ಲಿ ಲ್ಯಾಂಡ್ ಆಗುತ್ತದೆ. ಈ ವೇಳೆ ದುಷ್ಕರ್ಮಿಯನ್ನು ಬಂಧಿಸುವಲ್ಲಿ ಅಥವಾ ಆತನ ವಿರುದ್ಧ ಯಾವುದೇ ಕಾನೂನು ಕ್ರಮವನ್ನು ಏರ್ ಇಂಡಿಯಾ ತೆಗೆದುಕೊಂಡಿಲ್ಲ. ಈ ಬಗ್ಗೆ ಸಂತ್ರಸ್ತ ಮಹಿಳೆ ತೀವ್ರ ಅಸಮಾಧಾನದಿಂದ ಏರ್ ಇಂಡಿಯಾಗೆ ದೂರು ನೀಡಿದ್ದಾರೆ. ತಕ್ಷಣ ಉನ್ನತ ಮಟ್ಟದ ಅಧಿಕಾರಿಗಳು ವ್ಯಕ್ತಿಯ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ಅಲ್ಲದೆ ಘಟನೆ ಕುರಿತು ಏರ್ ಇಂಡಿಯಾ ಆಂತರಿಕ ತನಿಖೆಗೆ ಆದೇಶ ನೀಡಿದೆ. ಅಲ್ಲದೆ ಇಂತಹ ಕೃತ್ಯವನ್ನು ಮಾಡಿದ ಪ್ರಯಾಣಿಕನಿಗೆ ಆಜೀವ ಪ್ರಯಾಣ ನಿಷೇಧಿಸುವ ಕ್ರಮ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೆ ಪ್ರಕರಣವನ್ನು ಗಮನಕ್ಕೆ ತಾರದ ಸಿಬ್ಬಂದಿ ಬಗ್ಗೆಯೂ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಏರ್ ಇಂಡಿಯಾ ಮುಖ್ಯಸ್ಥ ಎನ್ ಚಂದ್ರಶೇಖರನ್ ತಿಳಿಸಿದ್ದಾರೆ.