ನ್ಯೂಸ್ ನಾಟೌಟ್: ಬರೋಬ್ಬರಿ 20 ವರ್ಷಗಳಿಂದ ತಾಯಿಯನ್ನು ಹಳೆ ಸ್ಕೂಟರ್ ನಲ್ಲೇ ಇಡೀ ದೇಶವನ್ನು ಸುತ್ತಾಡಿಸಿದ ಮೈಸೂರಿನ ಕೃಷ್ಣಕುಮಾರ್ ಇದೀಗ ತಿರುಗಾಟ ಮುಗಿಸಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ದೇವರಿಗೆ ಪೂಜೆಯನ್ನು ಸಲ್ಲಿಸಿದ್ದಾರೆ.ಕೊರೊನಾ ನಂತರ ಕೆಲ ತಿಂಗಳ ಹಿಂದೆಯಷ್ಟೇ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಮತ್ತೆ ಬೇರೆ ಬೇರೆ ರಾಜ್ಯಗಳಿಗೆ ತೆರಳಿದ್ದರು.
ಸುತ್ತಾಡದ ರಾಜ್ಯಗಳಿಲ್ಲ!
ಕೃಷ್ಣ ಕುಮಾರ್ ಅವರು ಕೊರೊನಾ ಅವಧಿಯಲ್ಲಿ ಸುತ್ತಾಟ ನಿಲ್ಲಿಸಿದ್ದರು.ಬಳಿಕ ಅವರ ಸುತ್ತಾಟ ಆರಂಭವಾಗಿದ್ದು ಕೆಲ ತಿಂಗಳ ಹಿಂದೆ.ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಕುಕ್ಕೆಯಿಂದ ತಮ್ಮ ಹಳೆಯ ಸ್ಕೂಟರ್ ಮೂಲಕ ಮತ್ತೆ ದೇಶ ಸುತ್ತಲು ಹೊರಟಿದ್ದರು.20 ವರ್ಷದ ಹಿಂದೆ ಸ್ಕೂಟರ್ ಒಂದನ್ನು ಖರೀದಿಸಿದ ಅವರು,ಸಮೀಪದಲ್ಲಿನ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದರು. 2018ರಿಂದ ಹೊರ ರಾಜ್ಯಗಳ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಲು ಆರಂಭಿಸಿದ್ದರು. ಮೈಸೂರಿನಿಂದ ಆರಂಭಗೊಂಡ ಇವರ ಪ್ರಯಾಣ ಕೇರಳ,ತಮಿಳುನಾಡು,ಆಂಧ್ರಪ್ರದೇಶ,ನೇಪಾಲ,ಭೂತಾನ್,ಬಿಹಾರ,ಅಸ್ಸಾಂ ಹೀಗೆ ಇವರು ಸುತ್ತಾಡದ ರಾಜ್ಯಗಳಿಲ್ಲ!
ಕುಕ್ಕೆ ಸುಬ್ರಹ್ಮಣ್ಯದಿಂದ ಪ್ರಯಾಣ:
ಕೊರೊನಾ ಮುಗಿದ ಬಳಿಕ ಮತ್ತೊಮ್ಮೆ ಕೃಷ್ಣ ಕುಮಾರ್ ಅವರು 72 ವರ್ಷದ ತಾಯಿ ಚೂಡ ರತ್ನಮ್ಮ ಜತೆ ಸ್ಕೂಟರ್ ನಲ್ಲಿ ಪ್ರವಾಸ ಆರಂಭಿಸಿದ್ದರು.ಕುಕ್ಕೆ ಸುಬ್ರಹ್ಮಣ್ಯದಿಂದ ಇವರ ಪ್ರಯಾಣ ಆರಂಭಗೊಂಡಿತ್ತು.ಆಗಸ್ಟ್ನಲ್ಲಿ ಕುಕ್ಕೆ ಸುಬ್ರಹ್ಮಣ್ಯದಿಂದ ತಮ್ಮ ಪಯಣ ಆರಂಭಿಸಿದ ಅವರು ಧರ್ಮಸ್ಥಳ, ಪುತ್ತೂರು, ವಿಟ್ಲ ಬಳಿಕ ಕೇರಳ, ತಮಿಳುನಾಡು ಪೂರ್ತಿ ಸುತ್ತಾಟ ನಡೆಸಿದ್ದಾರೆ. ಜತೆಯಾಗಿ ಈವರೆಗೆ ಸುಮಾರು 63,449 ಕಿ.ಲೋ. ಮೀಟರ್ ಸುತ್ತಾಟ ಪೂರೈಸಿದ ಹೆಮ್ಮೆ ಇವರದು.ಕೆಲ ವರ್ಷಗಳ ಹಿಂದೆ ಕೃಷ್ಣಕುಮಾರ್ ಉದ್ಯೋಗವನ್ನೇ ತೊರೆದಿದ್ದಾರೆ.ಅವಿವಾಹಿತರಾಗಿರುವ ಇವರು ತಾಯಿ ಜತೆ ಜೀವನ ಕಳೆಯುತ್ತಿದ್ದಾರೆ.
ಇತರರಿಗೂ ಮಾದರಿ
ಪ್ರವಾಸ ಅಂದಮೇಲೆ, ಫ್ರೆಂಡ್ಸ್, ಸಂಬಂಧಿಕರು, ಆಫೀಸ್ , ಸಂಘದ ವತಿಯಿಂದ ಹೋಗುವುದು ಸಾಮಾನ್ಯ. ಆದರೆ ಇವರಿಬ್ಬರು ಅದೆಲ್ಲದಕ್ಕು ವಿಭಿನ್ನವಾಗಿ ನಿಲ್ಲುತ್ತಾರೆ.ತಾಯಿ-ಮಗ ಎಂದರೆ ಹೀಗಿರಬೇಕು ಎಂಬುವುದಕ್ಕೆ ಇವರೇ ಉದಾಹರಣೆ.ಇತರರಿಗೂ ಇವರು ಮಾದರಿಯಾಗಿದ್ದಾರೆ.ಆಧುನಿಕ ಶ್ರವಣಕುಮಾರ ಎಂದರೂ ತಪ್ಪಾಗಲಾರದು.