ನ್ಯೂಸ್ ನಾಟೌಟ್ : ಪಕ್ಕದ ಮನೆಯ ಕಾರ್ಯಕ್ರಮ ಮುಗಿಸಿ ಮನೆಗೆ ಬರಲು ಗಂಡ ತಡ ಮಾಡಿದರು ಎಂಬ ಕಾರಣಕ್ಕೆ ಅಸಮಾಧಾನಗೊಂಡ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತರನ್ನು ಬಾಳ ಗ್ರಾಮದ ಒಟ್ಟೆಕಾಯಾರ್ ಮನೆಯ ಹರೀಶ್ ಅವರ ಪತ್ನಿ ದಿವ್ಯಾ (26) ಎಂದು ಗುರುತಿಸಲಾಗಿದೆ.
ಮೃತ ದಿವ್ಯಾ ಅವರ ತಾಯಿ, ಕೋಟೆಕಾರ್ ಮಾಡೂರಿನ ಗಿರಿಜಾ ಪೂಜಾರಿ ಅವರು ಸುರತ್ಕಲ್ ಠಾಣೆ ಗೆ ದೂರು ನೀಡಿದ್ದಾರೆ.ದೂರಿನಲ್ಲಿ ಮಗಳು ಮುಂಗೋಪಿ ಸ್ವಭಾವದವಳು ಎಂದು ಉಲ್ಲೇಖಿಸಿದ್ದಾರೆ. ಅಲ್ಲದೇ ಈ ಸಾವಿನ ಬಗ್ಗೆ ಯಾವುದೇ ಸಂಶಯವಿಲ್ಲವೆಂದೂ ಹೇಳಿದ್ದಾರೆ.
ದೂರಿನಲ್ಲೇನಿತ್ತು?
‘ಮಗಳು ದಿವ್ಯಾ ನಗರದ ಲೇಡಿಹಿಲ್ ನ ಔಷಧಾಲಯವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಮೊಗವೀರ ಯುವಕ ಹರೀಶ್ ಅವರನ್ನು ಪ್ರೀತಿಸಿದ್ದಳು. ನಗರದ ಆರ್ಯ ಸಮಾಜದಲ್ಲಿ 2022 ಮಾರ್ಚ್ 24ರಂದು ಅವರಿಬ್ಬರು ಸರಳವಾಗಿ ಮದುವೆಯಾಗಿದ್ದರು. ನಮಗೆ ವಿಷಯ ಗೊತ್ತಾದ ಬಳಿಕ ನಾವು ಅವರ ಮನೆಗೆ ಹೋಗಿ ಬರುತ್ತಿದ್ದೆವು. ದಂಪತಿ ಅನ್ಯೋನ್ಯವಾಗಿದ್ದರು.’
‘ಮಗಳು ಮುಂಗೋಪಿ ಸ್ವಭಾವದವಳು. ನೆರೆಮನೆಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಗಂಡ ಹೆಂಡತಿ ಒಟ್ಟಿಗೆ ಭಾಗವಹಿದ್ದರು. ಅಲ್ಲಿಂದ ಮನೆಗೆ ಹೊರಡುವಾಗ ಹರೀಶ್ ತಡ ಮಾಡಿದ್ದರು. ಈ ಕಾರಣದಿಂದ ಅಸಮಾಧಾನಗೊಂಡಿದ್ದ ದಿವ್ಯಾ ಒಬ್ಬಳೇ ಮನೆಗೆ ಮರಳಿದ್ದಳು. ಭಾನುವಾರ ಸಂಜೆ 3 ರಿಂದ 4 ಗಂಟೆ ನಡುವೆ ಮನೆಯ ಬೆಡ್ ರೂಂನಲ್ಲಿ ಚೂಡಿದಾರದ ಶಾಲು ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ. ಈ ಸಾವಿನ ಬಗ್ಗೆ ಯಾವುದೇ ಸಂಶಯವಿಲ್ಲ’ ಎಂದು ಗಿರಿಜಾ ಪೂಜಾರಿ ಅವರು ದೂರಿನಲ್ಲಿ ತಿಳಿಸಿದ್ದಾರೆ.