ನ್ಯೂಸ್ ನಾಟೌಟ್ :ಸುಳ್ಯ ತಾಲೂಕಿನಲ್ಲಿ ಕಾನೂನು ಪ್ರಕಾರವಾಗಿ ಪಯಸ್ವಿನಿ ನದಿಯಲ್ಲಿ ಬ್ಲಾಕ್ ಗುರುತಿಸಿ ಟೆಂಡರ್ ಪ್ರಕ್ರಿಯೆ ನಡೆಸಬೇಕು ಅಥವಾ ಸಂಪ್ರಾದಾಯಿಕ ರೀತಿಯಲ್ಲಿ ಗ್ರಾಮ ಪಂಚಾಯಿತಿಗೆ ವಹಿಸಿಕೊಟ್ಟು ಅವರು ಮರಳು ತೆಗೆಯಲು ಪರವಾನಿಗೆ ನೀಡಬೇಕು ಎಂದು ಮರಳು ಗುತ್ತಿಗೆದಾರರ ಸಂಘದ ಒಕ್ಕೂಟ ಆಗ್ರಹಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅನಿಲ್ ಕುಮಾರ್ ಕೆ .ಸಿ 2014 ರ ವರೆಗೆ ಸಾಂಪ್ರದಾಯಿಕವಾಗಿ ಮರಳುಗಾರಿಕೆ ನಡೆಯುತ್ತಿತ್ತು. ಸುಳ್ಯ ತಾಲೂಕಿನ 7 ಮಂದಿಗೆ ಲೈಸೆನ್ಸ್ ನೀಡಲಾಗಿತ್ತು. ಟೆಂಡರ್ ನಡೆಸದ ಕಾರಣ ಅಕ್ರಮ ಮರಳು ದಂಧೆ ಹೆಚ್ಚಾಗಿ ಮರಳಿನ ಅಭಾವ ಉಂಟಾಗಿದೆ. ಈ ನಿಟ್ಟಿನಲ್ಲಿ ಮರಳು ನೀತಿಯನ್ನು ಸಮರ್ಪಕವಾಗಿ ಅನುಷ್ಟಾನಕ್ಕೆ ತರಬೇಕು. ಇದರಿಂದ ಜನ ಸಾಮಾನ್ಯರಿಗೆ ಸುಲಭದಲ್ಲಿ ಮರಳು ಸಿಗುವಂತಾಗುತ್ತದೆ. ಅನಧಿಕೃತ ಮರಳುಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಈ ಬೇಡಿಕೆಯ ಬಗ್ಗೆ ಶಾಸಕರಿಗೆ, ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಬೇಡಿಕೆ ಈಡೇರದಿದ್ದರೆ ಜ.16 ರಂದು ಸುಳ್ಯ ಶಾಸಕರ ಕಚೇರಿಯಲ್ಲಿ ಮೌನ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಆಗ್ರಹಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಮರಳಿಗೆ ಯಾವುದೇ ರೀತಿಯ ಅಭಾವವಿಲ್ಲ. ಆದರೆ ಕೃತಕ ಅಭಾವ ಸೃಷ್ಟಿಸಲಾಗಿದೆ. ಪ್ರತಿ ವರ್ಷ ನದಿ ಅಗಲಿಕರಣವಾಗುತ್ತಿದೆ .ಕಲ್ಲುಗುಂಡಿಯಂತಹ ಕಡೆಗಳಲ್ಲಿ ಹೊಳೆಗಳು ದಿಕ್ಕು ಬದಲಿಸಿವೆ.ಕಲ್ಲುಗುಂಡಿಯಿಂದ ಆರಂಭವಾಗಿ ಹಲವು ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಜಿತ್ ಪೇರಾಲು, ಜಯರಾಮ ಭಾರದ್ವಾಜ್, ರಿಫಾಯಿ ಪೈಚಾರ್, ದಾಮೋದರ ನೀರ್ಪಾಡಿ, ತಾರನಾಥ ಕೊಡೆಂಚಿಕಾರ್ ಉಪಸ್ಥಿತರಿದ್ದರು.