ನ್ಯೂಸ್ ನಾಟೌಟ್:ಸುಳ್ಯ ಪರಿಸರದಲ್ಲಿ ಸಂಭ್ರಮ ಮನೆ ಮಾಡಿದೆ. ಇಂದಿನಿಂದ 10 ದಿನಗಳ ಕಾಲ ವೈಭವದ ಬ್ರಹ್ಮಕಲಶೋತ್ಸವ ಸುಳ್ಯ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಲಿದೆ. ಸಾವಿರಾರು ಭಕ್ತರು ಈ ವೈಭವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾಗಲಿದ್ದಾರೆ.
ಇಂದಿನಿಂದ ಸಂಭ್ರಮ-ಸಡಗರ:
ಬ್ರಹ್ಮಕಲಶೋತ್ಸವ ಪ್ರಯುಕ್ತ ಇಂದು ಬೆಳಗ್ಗೆ ಸುಳ್ಯದ ಶ್ರೀ ರಾಮ ಭಜನಾ ಮಂದಿರದ ಮುಂಭಾಗದಿಂದ ಹಸಿರುವಾಣಿ ಮೆರವಣಿಗೆ ನಡೆಯಿತು.ಈ ಮೆರವಣಿಗೆಯಲ್ಲಿ ನಾಸಿಕ್ ಬ್ಯಾಂಡ್, ವೀರಗಾಸೆ ಕುಣಿತ, ಡೊಳ್ಳು ಕುಣಿತಗಳು ವರ್ಣರಂಜಿತವಾಗಿತ್ತು.ಹಸಿರು ಕಾಣಿಕೆ ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು. ದೇವಸ್ಥಾನ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಉಪ ಸಮಿತಿಗಳ ಪದಾಧಿಕಾರಿಗಳು ಪಾಲ್ಗೊಂಡು ಈ ವೈಭವಕ್ಕೆ ಸಾಕ್ಷಿಯಾದರು.
ಸಾವಿರಾರು ಭಕ್ತರು ಭಾಗಿ:
ಇಂದಿನಿಂದ 10 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ಪ್ರತಿ ದಿನ ಅನ್ನದಾನ ನೆರವೇರಲಿದ್ದು,ಊರ ಪರವೂರ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುವ ನಿರೀಕ್ಷೆಯಿದೆ.ಈ ಅದ್ದೂರಿ ಬ್ರಹ್ಮಕಲಶೋತ್ಸವಕ್ಕೆ ಕಳೆದ ಒಂದು ತಿಂಗಳಿನಿಂದ ತಯಾರಿ ನಡೆಯುತ್ತಿದ್ದು, ದೇವಳದ ಸುತ್ತ ಬಂಟಿಂಗ್ಸ್ , ಕಟೌಟ್ ರಾರಾಜಿಸುತ್ತಿದೆ. ಇಂದು ಸಂಜೆ ದೇವಸ್ಥಾನಕ್ಕೆ ತಂತ್ರಿಗಳು ಆಗಮಿಸಲಿದ್ದಾರೆ. ಪೂರ್ಣಕುಂಭ ಸ್ವಾಗತದ ಮೂಲಕ ಅವರನ್ನು ಬರಮಾಡಿಕೊಳ್ಳಲಾಗುವುದು. ಸಂಜೆ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.