ನ್ಯೂಸ್ ನಾಟೌಟ್ : ಅರಣ್ಯ ಪ್ರದೇಶವೊಂದರಲ್ಲಿ ವಾಮಾಚಾರ ನಡೆದ ನಡೆದ ಘಟನೆ ಕೊಡಗು ಜಿಲ್ಲೆ ಮಡಿಕೇರಿ ಬಳಿಯ ಮದೆನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟತ್ತೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಅಲ್ಲಿ ವಾಮಾಚಾರ ನಡೆದಿದ್ದು, ಆಗಂತುಕರು ರಾತ್ರಿ ವೇಳೆ ಪೂಜೆ ಮಾಡಿ ಮೂರು ಕೋಳಿಗಳನ್ನು ಬಲಿಕೊಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೋಳಿಗಳ ತಲೆ ಬಿದ್ದಿತ್ತು!
ವಾಮಾಚಾರ ನಡೆದ ಸ್ಥಳದ ಪಕ್ಕದ ಜಾಗದಲ್ಲಿ ವಾಸವಾಗಿರುವ ಹೊಸಮನೆ ಪ್ರವೀಣ್ ಅವರು ಪತ್ನಿ ಕವಿತಾ ಜತೆ ಮನೆಗೆ ಹೋಗುವಾಗ ಈ ಘಟನೆ ಬೆಳಕಿಗೆ ಬಂದಿದೆ. ಮೊದಲು ಮದ್ಯದ ಬಾಟಲಿ ಹಾಗೂ ಕೆಲವು ಬಾಳೆ ಎಲೆಯನ್ನು ಕಂಡಿದ್ದಾರೆ.ಯಾರೋ ಯುವಕರು ಮೋಜು ಮಸ್ತಿ ಮಾಡಿರಬೇಕೆಂದುಕೊಂಡ ದಂಪತಿ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ತೋಟಕ್ಕೆ ತೆರಳುವ ವೇಳೆ ಮತ್ತೊಂದು ದಿಕ್ಕಿನಲ್ಲಿ ಕೋಳಿಯೊಂದರ ತಲೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲೇ ಮೂರು ಕಡೆಗಳಲ್ಲಿ ಬಾಳೆ ಎಲೆಯಲ್ಲಿ ಎಡೆಯಿಟ್ಟು ಪೂಜೆ ಮಾಡಿರುವುದು ಬೆಳಕಿಗೆ ಬಂದಿದೆ.
ಸ್ಥಳೀಯರಲ್ಲಿ ಆತಂಕ:
ಮೂರು ವಿಭಿನ್ನ ದಿಕ್ಕುಗಳಲ್ಲಿ ಪೂಜೆ ಮಾಡಿರುವ ಕಿಡಿಗೇಡಿಗಳು ಕೋಳಿ, ಪಾಯಸ, ತೆಂಗಿನಕಾಯಿ, ಮೊಸರು, ಅವಲಕ್ಕಿ ಹಾಗೂ ಹಿಟ್ಟಿನಲ್ಲಿ ಮಾಡಿರುವ ಉಂಡೆಯಂತಹ ಪದಾರ್ಥವನ್ನು ಪೂಜೆಗೆ ಬಳಸಲಾಗಿದೆ. ಇದು ಸ್ಥಳೀಯರಲ್ಲಿ ಆತಂಕವನ್ನು ಹುಟ್ಟುಹಾಕಿದೆ.ವಾಮಾಚಾರ ಮಾಡಲ್ಪಟ್ಟ ಸ್ಥಳ ದಿವಂಗತ ಕೂಪದಿರ ಮುತ್ತು ಎಂಬುವವರ ಸ್ವಾಧೀನದಲ್ಲಿರುವ ಜಾಗ ಆಗಿದ್ದು,ಬಿಟ್ಟತ್ತೂರು ಮುಖ್ಯ ಜಂಕ್ಷನ್ ಬಳಿಯಿಂದ 500 ಮೀಟರ್ ಕಾಡಿನ ಮೇಲ್ದಾಗದಲ್ಲಿ ವಾಮಾಚಾರ ನಡೆಸಲಾಗಿದೆ. ವಾಮಾಚಾರ ಮಾಡಿರುವವರು ಈ ಜಾಗದ ಕುರಿತು ತಿಳಿದಿರುವವರೇ ಮಾಡಿರಬೇಕು ಎಂದು ಶಂಕಿಸಲಾಗಿದೆ.
ಜಾಗ ವಶಕ್ಕಾಗಿ ಹೀಗೆ ಮಾಡಿರಬಹುದೇ?
ವಾಮಾಚಾರ ಮಾಡಿರುವ ಸ್ಥಳ ಪದಿರಮುತ್ತು, ರವಿಕುಮಾರ್, ಸತೀಶ್ ಹಾಗೂ ಪಳಂಗಪ್ಪ ಎಂಬುವವರ ಸ್ವಾಧೀನದಲ್ಲಿದೆ. ಕೆಲವು ವರ್ಷಗಳಿಂದ ಜಾಗದ ಜಗಳ ಇದೆ.ಎಲ್ಲ ನಾಲ್ವರು ಜಾಗವನ್ನು ತಮ್ಮ ತಮ್ಮ ಹೆಸರುಗಳಿಗೆ ವರ್ಗಾವಣಿ ಮಾಡಲು ತಹಸೀಲ್ದಾರ್ ಕಚೇರಿಯಲ್ಲಿ ದಾಖಲೆಗಳನ್ನುನೀಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದ್ದು, ಜಾಗವನ್ನು ವಶಪಡಿಸಿಕೊಳ್ಳಲು ನಾಲ್ವರಲ್ಲಿ ಒಬ್ಬರು ಹೀಗೆ ಮಾಡಿದ್ದಾರೆಯೇ ಎಂಬ ಸಂಶಯ ವ್ಯಕ್ತವಾಗಿದೆ.
ಮೂರು ಹುಂಜ ಕೋಳಿಗಳು ಬಲಿ:
ಮೂರು ಕಡೆಗಳನ್ನು ಗೊತ್ತು ಮಾಡಿ ಪ್ರತ್ಯೇಕವಾಗಿ ಸ್ವಚ್ಛಗೊಳಿಸಿ ಎಲ್ಲ ಮೂರು ಬಾಳೆ ಎಲೆಯಲ್ಲಿ ಮಣ್ಣಿನ ಸಣ್ಣ ಸಣ್ಣ ಮೂರು ಮಡಿಕೆಗಳನ್ನು ಇಡಲಾಗಿದೆ. ಜತೆಗೆ ಅಕ್ಕಿಯಿಂದ ಮಾಡಿರುವ ಉಂಡೆಯಾಕಾರದ ಹಳದಿ ಬಣ್ಣದ ಕಡುಬು, ಅವಲಕ್ಕಿ, ಲೋಟದಲ್ಲಿ ಪಾಯಸ ಹಾಗೂ ಮದ್ಯವನ್ನು ಇಡಲಾಗಿದೆ.ಪೂಜೆ ಮಾಡಲಾಗಿರುವ ಸ್ಥಳದ ಎಲ್ಲ ವಿರುದ್ಧ ದಿಕ್ಕಿನಲ್ಲಿ ಕೋಳಿ ತಲೆ ಒಂದು ಕಡೆ ಹಾಗೂ ಅದರ ದೇಹವನ್ನು ಪೂಜಾ ಸ್ಥಳದ ಹಿಂಬದಿಗೆ ಎಸೆಯಲಾಗಿದೆ.ವಾಮಾಚಾರದ ಪೂಜೆಗೆ ಒಟ್ಟು ಮೂರು ಹುಂಜ ಕೋಳಿಗಳನ್ನು ಬಲಿ ನೀಡಲಾಗಿದೆ.