ನ್ಯೂಸ್ ನಾಟೌಟ್: ಅಪ್ರಾಪ್ತ ಹಿಂದೂ ಬಾಲಕಿಯನ್ನು ಭೇಟಿಯಾಗಲು ಬಂದ ಮುಸ್ಲಿಂ ಹುಡುಗನಿಗೆ ಥಳಿಸಿರುವ ಪ್ರಕರಣಕ್ಕೆ ಇದೀಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೆಟ್ಟು ತಿಂದವನ ಕಡೆಯಿಂದಲೂ ಹುಡುಗಿಯ ತಂದೆಯ ಕಡೆಯಿಂದಲೂ ದೂರು-ಪ್ರತಿದೂರು ದಾಖಲಾಗಿದೆ. ಈ ನಡುವೆ ಸುಬ್ರಹ್ಮಣ್ಯದಲ್ಲಿ ಭಾರಿ ಪ್ರತಿಭಟನೆಗೆ ವೇದಿಕೆ ಸಿದ್ಧವಾಗಿದೆ.
ಇಂದು (ಶನಿವಾರ) ಬೆಳಗ್ಗೆ ೧೦ಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯೆದುರು ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ಪೊಲೀಸರು ಹಿಂದೂ ಕಾರ್ಯಕರ್ತರನ್ನೇ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಠಾಣೆ ಎದುರು ಪ್ರತಿಭಟನೆಗೆ ತಯಾರಿ ನಡೆಸಿಕೊಂಡಿದ್ದಾರೆ. ಈ ಹಿಂದೆ ಸುಬ್ರಹ್ಮಣ್ಯ ಜಾತ್ರೋತ್ಸವ ಸಂದರ್ಭದಲ್ಲಿ ಆದ ಘಟನೆ ಹಾಗೂ ಇದೀಗ ಸುಬ್ರಹ್ಮಣ್ಯದಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಜತೆಗಿದ್ದ ಮುಸ್ಲಿಂ ಯುವಕನಿಗೆ ಥಳಿಸಿದ ಪ್ರಕರಣದಲ್ಲಿ ಪೊಲೀಸರು ಅಮಾಯಕ ಹಿಂದೂ ಯುವಕರನ್ನೇ ಬಂಧಿಸಿ ಮಾನಸಿಕ ಕಿರಿಕಿರಿ ನಡೆಸಿದ್ದಾರೆ. ಪೊಲೀಸರು ಟಾರ್ಗೆಟ್ ಮಾಡಿ ಹಿಂದೂ ಕಾರ್ಯಕರ್ತರ ಮೇಲೆ ಕೇಸು ದಾಖಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಎದುರು ಪ್ರತಿಭಟನಾ ಸಭೆ ನಡೆಯಲಿದೆ. ಈ ಬಗ್ಗೆ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದ ಹಿಂದೂ ಜಾಗರಣಾ ವೇದಿಕೆ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಮಹೇಶ್ ಉಗ್ರಾಣಿ ಮನೆ, ಸುಮಾರು ಐನೂರಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರತಿ ಸಲವೂ ನಮ್ಮ ಕಾರ್ಯಕರ್ತರನ್ನೇ ಪೊಲೀಸರು ಟಾರ್ಗೆಟ್ ಮಾಡುತ್ತಿರುವುದು ವಿಪರ್ಯಾಸವೇ ಸರಿ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.