ನ್ಯೂಸ್ ನಾಟೌಟ್: ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ. ಈ ಘೋಷಣೆಗೆ ಮುನ್ನವೇ ಯಾರಿಗೆ ಟಿಕೇಟ್ ಸಿಗಬಹುದು ಅನ್ನುವ ಲೆಕ್ಕಾಚಾರವೂ ಜೋರಾಗಿದೆ. ಒಂದೆಡೆ ಕಾಂಗ್ರೆಸ್, ಇನ್ನೊಂದೆಡೆ ಬಿಜೆಪಿ. ತಮ್ಮದೇ ಲೆಕ್ಕಾಚಾರದೊಂದಿಗೆ ಕಣಕ್ಕಿಳಿಯಲು ತಾಲೀಮಿನಲ್ಲಿವೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಹಲವು ಅಚ್ಚರಿಯ ವಿಚಾರಗಳು ಹೊರಬೀಳುತ್ತಿವೆ. ಬಿಜೆಪಿ ಪಕ್ಷದೊಳಗಿನಿಂದಲೇ ಇಂತಹ ವಿಚಾರ ಮುನ್ನೆಲೆಗೆ ಬರುತ್ತಿದ್ದು ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಂತಹ ವೈರಲ್ ಚರ್ಚೆಯ ವಿಷಯದಲ್ಲಿರುವ ಕ್ಷೇತ್ರಗಳಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರವೂ ಒಂದು ಅನ್ನುವುದು ವಿಶೇಷ.
ಬೆಳ್ತಂಗಡಿ ವಿಧಾನ ಸಭಾಕ್ಷೇತ್ರ ಹರೀಶ್ ಪೂಂಜಾ ಅವರ ಪ್ರಬಲ ಕೇತ್ರ ಎಂದೇ ಹೇಳಬಹುದು. ಹಲವಾರು ಜನ ಮುಂದಿನ ಬಾರಿಯೂ ಶಾಸಕರಾಗಿ ಹರೀಶ್ ಪೂಂಜಾ ಅವರನ್ನು ಆಯ್ಕೆ ಮಾಡುತ್ತೇವೆ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದಾರೆ. ಬೆಳ್ತಂಗಡಿಯಲ್ಲಿ ಬಿಜೆಪಿಯಿಂದ ಹರೀಶ್ ಪೂಂಜಾ ಅವರನ್ನು ಹೊರತುಪಡಿಸಿ ಮತ್ತೊಬ್ಬ ಒಳ್ಳೆಯ ಅಭ್ಯರ್ಥಿ ಇಲ್ಲ ಅನ್ನವ ಅಭಿಪ್ರಾಯವಿದೆ. ಆದರೆ ಬಿಜೆಪಿಯಲ್ಲಿಯೇ ಪೂಂಜಾ ಬದಲಿಗೆ ಕೆಲವರನ್ನು ನಿಲ್ಲಿಸಬೇಕು ಅನ್ನುವ ಒತ್ತಾಯ ಕೇಳಿ ಬಂದಿದೆ ಎನ್ನಲಾಗುತ್ತಿದೆ. ಈ ಬಗೆಗಿನ ಪೋಸ್ಟ್ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಹಾಕಿರುವ ಪೋಸ್ಟ್ ಪ್ರಕಾರ ಬೆಳ್ತಂಗಡಿಯಲ್ಲಿ ಪೂಂಜಾರಷ್ಟೇ ಇನ್ನಿಬ್ಬರು ಪ್ರಬಲ ಟಿಕೇಟ್ ಆಕಾಂಕ್ಷಿಗಳಿದ್ದಾರೆ ಎನ್ನಲಾಗುತ್ತಿದೆ. ಬಿಲ್ಲವ ನಾಯಕ ಸಂಪತ್ ಸುವರ್ಣರ ಮೇಲೆ ಬಿಜೆಪಿ ಹೈಕಮಾಂಡ್ ಒಲವು ಇದೆ ಎನ್ನಲಾಗುತ್ತಿದೆ. ಮತ್ತೊಂದು ಕಡೆ ಉದ್ಯಮಿ ಸಮಾಜ ಸೇವಕ ಶಶಿಧರ್ ಶೆಟ್ಟಿಯವರಿಗೆ ಟಿಕೇಟ್ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಈ ಬಗ್ಗೆ ನ್ಯೂಸ್ ನಾಟೌಟ್ ಸಂಪತ್ ಸುವರ್ಣ ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದಾಗ ಮಧ್ಯಾಹ್ನ ತಿಳಿಸುತ್ತೇನೆ ಎಂದು ಜಾಣ ನಡೆ ಪ್ರದರ್ಶಿಸಿ ಅವರು ತಪ್ಪಿಸಿಕೊಂಡರು.
ಬೆಳ್ತಂಗಡಿಯಲ್ಲಿ ಬಿಜೆಪಿ ಹರೀಶ್ ಪೂಂಜಾ ಅವರನ್ನು ಚುನಾವಣಾ ಕಣದಿಂದ ಟಿಕೆಟ್ ತಪ್ಪಿಸುವುದು ಅಷ್ಟು ಸುಲಭ ಅಲ್ಲ ಅನ್ನುತ್ತಿವೆ ಬಿಜೆಪಿ ಮೂಲಗಳು. ಪ್ರಧಾನಿ ಮೋದಿ ಅವರ ಸರ್ವೆಯ ದೇಶದಲ್ಲಿ ಗೆಲ್ಲುವ ವಿಧಾನ ಸಭಾ ಕಣದ ಟಾಪ್ ೧೦ ಅಭ್ಯರ್ಥಿಗಳ ಪೈಕಿ ಹರೀಶ್ ಪೂಂಜಾ ೫ನೇ ಸ್ಥಾನದಲ್ಲಿದ್ದಾರೆ ಎನ್ನಲಾಗುತ್ತಿದೆ. ಏನೇ ಇರಬಹುದು ರಾಜಕೀಯ ಒಂದು ಚದುರಂಗ ಆಟವಿದ್ದಂತೆ. ಯಾವ ಸಂದರ್ಭದಲ್ಲಿ ಎಂತಹ ತಿರುವು ಕೂಡ ಪಡೆದುಕೊಳ್ಳಬಹುದು. ಹಾಗಾಗಿ ಯಾವುದನ್ನೂ ತಕ್ಷಣ ಅಂದಾಜಿಸುವುದು ಕಷ್ಟ ಸಾಧ್ಯ.