ನ್ಯೂಸ್ ನಾಟೌಟ್: ನ್ಯೂಯಾರ್ಕ್ ನಿಂದ -ದಿಲ್ಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಸಹ ಪ್ರಯಾಣಿಕ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಕ್ಷುಲ್ಲಕ ವಿಚಾರಕ್ಕೆ ಮಹಿಳೆ ಜತೆ ವಾಗ್ವಾದ ನಡೆಸಿದ್ದ ಬಳಿಕ ಶಂಕರ್ ಮಿಶ್ರಾ ಅನ್ನುವ ವ್ಯಕ್ತಿ ಸಹ ಪ್ರಯಾಣಿಕ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿ ವಿಕೃತಿ ಮೆರೆದಿದ್ದ. ವಿಮಾನದ ಬ್ಯುಸಿನೆಸ್ ಕ್ಲಾಸ್ ವಿಭಾಗದಲ್ಲಿ ದುರ್ಘಟನೆ ಸಂಭವಿಸಿತ್ತು. ಈತ ದೆಹಲಿಯಲ್ಲಿ ಇಳಿದ ನಂತರ ಯಾವುದೇ ಬಂಧನಕ್ಕೆ ಒಳಗಾಗಿರಲಿಲ್ಲ. ಆರಾಮವಾಗಿಯೇ ಸ್ಥಳದಿಂದ ತೆರಳಿದ್ದ. ವಿಮಾನದ ಸಿಬ್ಬಂದಿ ಕೂಡ ಆತನನ್ನು ವಿಚಾರಣೆಗೆ ಒಳಪಡಿಸಿರಲಿಲ್ಲ. ಆದರೆ ನೊಂದ ಮಹಿಳೆ ಏರ್ ಇಂಡಿಯಾ ಸಂಸ್ಥೆಯ ಉನ್ನತ ಸಮಿತಿಗೆ ದೂರು ನೀಡಿದ್ದರು. ಈ ಪ್ರಕಾರವಾಗಿ ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಅಂತಿಮವಾಗಿ ಆತನನ್ನು ಬೆಂಗಳೂರಿನ ಮಾರತ್ ಹಳ್ಳಿ ಸಮೀಪದಲ್ಲಿದ್ದ ಆತನ ಮನೆಯಿಂದ ಶುಕ್ರವಾರ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.