ನ್ಯೂಸ್ ನಾಟೌಟ್ :ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ಇಡೀ ದೇಶದಲ್ಲೇ ಬಾರಿ ಸುದ್ದಿ ಮಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಇದೀಗ ವಿಮಾನಯಾನ ನಿಯಂತ್ರಕ ಡಿಜಿಸಿಎ ಪ್ರಮುಖ ಕ್ರಮ ಕೈಗೊಂಡಿದೆ. ಏರ್ ಇಂಡಿಯಾಗೆ 30 ಲಕ್ಷ ರೂಪಾಯಿ ದಂಡ ವಿಧಿಸಿದೆ. ಡಿಜಿಸಿಎಯ ಪ್ರಕಾರ ನಮ್ಮ ವರದಿ ಪ್ರಕ್ರಿಯೆಯಲ್ಲಿನ ನ್ಯೂನತೆಗಳನ್ನು ನಾವು ಒಪ್ಪಿಕೊಳ್ಳುತ್ತೇವೆ, ಅವುಗಳನ್ನು ತೆಗೆದುಹಾಕಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಏರ್ ಇಂಡಿಯಾ ಹೇಳಿದೆ. ಅನುಚಿತವಾಗಿ ವರ್ತಿಸುವ ಪ್ರಯಾಣಿಕರನ್ನು ಒಳಗೊಂಡ ಘಟನೆಗಳನ್ನು ಎದುರಿಸಲು ನೀತಿಗಳ ಬಗ್ಗೆ ಸಿಬ್ಬಂದಿ ಸದಸ್ಯರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ಏರ್ ಇಂಡಿಯಾ ಹೇಳಿದೆ.
ನವೆಂಬರ್ 26 ರಂದು, ಪ್ರಯಾಣಿಕರೊಬ್ಬರು ಕುಡಿದು ವಿಮಾನದಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಈ ವೇಳೆ ಮಹಿಳೆ ಏರ್ ಇಂಡಿಯಾ ಸೇರಿದಂತೆ ಸಂಬಂಧಪಟ್ಟ ಸಂಸ್ಥೆಗಳಿಗೆ ದೂರು ನೀಡಿದ್ದರು. ಇದಾದ ಬಳಿಕ ದೆಹಲಿಯಲ್ಲಿ ಸಂಬಂಧಪಟ್ಟ ಪ್ರಯಾಣಿಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆರೋಪಿಯನ್ನು ಅವರ ಕಂಪನಿ ಕೆಲಸದಿಂದ ವಜಾಗೊಳಿಸಿದೆ. ಆರೋಪಿಯೂ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದ.