ನ್ಯೂಸ್ ನಾಟೌಟ್: ಕಳೆದ ಕೆಲವು ತಿಂಗಳಿನಿಂದ ತಣ್ಣಗಾಗಿದ್ದ ಕರಾವಳಿಯಲ್ಲಿ ಮತ್ತೆ ನೆತ್ತರ ಓಕುಳಿ ಹರಿದಿದೆ. ಶನಿವಾರ ಮಂಗಳೂರಿನ ಸುರತ್ಕಲ್ ಬಳಿ ಜಲೀಲ್ ಎಂಬ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆಗೈಯಲಾಗಿತ್ತು. ಫಾಜಿಲ್ ಹತ್ಯೆಯಿಂದ ಮಂಗಳೂರು ಅಂದೊಮ್ಮೆ ಉದ್ವಿಗ್ನವಾಗಿತ್ತು. ಇದೀಗ ಮತ್ತೊಂದು ಹತ್ಯೆಯಾಗಿದ್ದು ಸಾರ್ವಜನಿಕ ಶಾಂತಿಗೆ ದಕ್ಕೆಯಾಗಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿತ ದೃಷ್ಟಿಯಿಂದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿ ಕುಮಾರ್ ಅವರು, ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ಇಂದಿನಿಂದ (ಡಿ.೨೫) ಬೆಳಗ್ಗೆ ೬ ಗಂಟೆಯಿಂದ ಡಿ.೨೭ರ ಬೆಳಗ್ಗೆ ೬ ಗಂಟೆವರೆಗೆ ಸೆಕ್ಷನ್ ೧೪೪ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.
ನಿಷೇಧಿತ ಪ್ರದೇಶದಲ್ಲಿ ಸಾರ್ವಜನಿಕರು ಐದು ಜನರು ಅಥವಾ ಅದಕ್ಕಿಂತ ಹೆಚ್ಚು ಗುಂಪು ಸೇರಬಾರದು, ಶಸ್ತ್ರಾಸ್ತ್ರಗಳನ್ನು ಸಾಗಿಸಬಾರದು. ಪಟಾಕಿ ಅಥವಾ ಸ್ಫೋಟಕಗಳನ್ನು ಸಿಡಿಸಬಾರದು, ವ್ಯಕ್ತಿ ಅಥವಾ ಶವಗಳ ಪ್ರತಿಕೃತಿ ದಹನ ಮಾಡುವಂತಿಲ್ಲ. ಕಲ್ಲುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಒಯ್ಯುವಂತಿಲ್ಲ. ನಿಯಮ ಮೀರಿದ್ರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.