ನ್ಯೂಸ್ ನಾಟೌಟ್ : ನೀವು ವಿವಿಧ ಶೈಲಿಯ ಗೂಡುದೀಪ ನೋಡಿರಬಹುದು. ಅವುಗಳನ್ನು ರೆಡಿ ಮಾಡಿರಬಹುದು. ಪ್ಲಾಸ್ಟಿಕ್ ಗೂಡುದೀಪಗಳ ಅಬ್ಬರ ಜಾಸ್ತಿರುವ ಈ ಕಾಲಘಟ್ಟದಲ್ಲಿ ಇಲ್ಲೊಬ್ಬರು ತರಕಾರಿ ಬೀಜಗಳನ್ನು ಒಟ್ಟುಗೂಡಿಸಿ ಗೂಡು ದೀಪವನ್ನು ತಯಾರು ಮಾಡಿದ್ದಾರೆ. ಹೌದು, ಜಗದೀಶ್ ಅಮೀನ್ ಈ ಕಲಾಗಾರ ‘ತರಕಾರಿ ಬಳಸಿ ಆರೋಗ್ಯ ವೃದ್ದಿಸಿ’ ಎಂಬ ಧ್ಯೇಯ ವಾಕ್ಯದ ಮೂಲಕ ಜನ ಜಾಗೃತಿ ಮೂಡಿಸಿ ತರಕಾರಿ ಬೀಜದಿಂದಲೇ ವಿವಿಧ ಶೈಲಿಯ ಗೂಡು ದೀಪಗಳನ್ನು ಮಾಡಿ ಜನರ ಗಮನ ಸೆಳೆದಿದ್ದಾರೆ.
ಯಾರಿವರು ಜಗದೀಶ್ ಅಮೀನ್ ?
ಮೂಲತಃ ಸುಕಂದ ಕಟ್ಟೆ ಬಜಪೆ ನಿವಾಸಿ. ಕಳೆದ ೨ ವರ್ಷಗಳಿಂದ ಅಕ್ಕ ಪಕ್ಕದಲ್ಲಿ ಬಿಸಾಕಿದ ವಿವಿಧ ತರಕಾರಿ ಬೀಜ ಹಾಗೂ ಭತ್ತದ ಗರಿಗಳನ್ನು ಶೇಖರಣೆ ಮಾಡಿ ಕಳೆದ ೯ ತಿಂಗಳಿನಿಂದ ಈ ಪ್ರಯತ್ನ ಮಾಡಿದ್ದಾರೆ. ಈ ಗೂಡು ದೀಪಗಳ ತಯಾರಿಗೆ ಹಗಲಿರುಳು ಶ್ರಮಪಟ್ಟಿದ್ದಾರೆ. ಯುವ ಪೀಳಿಗೆ ಕೃಷಿ ಕಡೆಗೆ ಗಮನ ಸೆಳೆಯುವಂತೆ ಮಾಡಲು ಈ ಆಕರ್ಷಣೀಯ ಕಲಾ ಕೃತಿಗಳನ್ನು ಮಾಡಿ ಬೆರಗುಗಣ್ಣಿನಲ್ಲಿ ನೋಡುವಂತೆ ಮಾಡಿದ್ದಾರೆ.
ಕಣ್ಮನ ಸೆಳೆಯುವ ಗೂಡುದೀಪ:
ಇವರು ತಯಾರಿಸಿದ ಗೂಡುದೀಪಗಳು ಜನಮನ್ನಣೆಗೂ ಪಾತ್ರವಾಗುತ್ತಿದೆ.ಪರಿಸರ ಸ್ನೇಹಿ ಗೂಡುದೀಪಗಳಿಗೆ ಇಂದು ಭಾರಿ ಬೇಡಿಕೆಯಿರುವುದರಿಂದ ಅನೇಕ ಮಂದಿ ಇವರ ಗೂಡುದೀಪ ಶೈಲಿಗೆ ಮಾರುಹೋಗಿದ್ದಾರೆ.ರೈತರು ಮತ್ತು ಜನತೆಯನ್ನು ಕೃಷಿಯ ಕಡೆಗೆ ಆಕರ್ಷಿಸಲು ವಿವಿಧ ರೀತಿಯ ೨೫ ಕ್ಕೂ ಹೆಚ್ಚು ತರಕಾರಿ ಬೀಜಗಳನ್ನು ಉಪಯೋಗಿಸುತ್ತಾರೆ. ಈರುಳ್ಳಿ, ಕ್ಯಾರೆಟ್ ,ಮೂಲಂಗಿ,ಬದನೆ, ಅಲಸಂಡೆ,ಪಾಲಕ್ ಸೊಪ್ಪು, ಕೊತ್ತಂಬರಿ ಸೊಪ್ಪು, ಮೆಂತ್ಯೆ ಸೊಪ್ಪು, ಸಬಸಿಗೆ ಸೊಪ್ಪು, ಹರಿವೆ ಸೊಪ್ಪು, ಪುಂಡಿ ಸೊಪ್ಪು, ಕುಂಬಳಕಾಯಿ, ಬೂದು ಕುಂಬಳ ಕಾಯಿ, ಸೌತೆ, ಮುಳ್ಳು ಸೌತೆ, ಬೆಂಡೆ, ಕಾಯಿ ಮೆಣಸು, ಹೀರೆ ಕಾಯಿ, ಸೋರೆಕಾಯಿ, ಹಾಗಲಕಾಯಿ, ಪಡವಲಕಾಯಿ, ಸಾಸಿವೆ, ಅಲಸಂಡೆ ಮುಂತಾದ ತರಕಾರಿ ಹಾಗೂ ಅದರ ಬೀಜಗಳನ್ನು ಬಳಸಿ ಕೊಂಡಿದ್ದಾರೆ. ನಾಡಿನ ವಿವಿಧ ಕಲಾಪ್ರಕಾರಗಳಾದ ಯಕ್ಷಗಾನ , ಭರತನಾಟ್ಯ, ಡೊಳ್ಳುಕುಣಿತ, ಕೋಲಾಟ, ಚೆಂಡೆ ಮೇಳ, ಕೇರಳದ ಕಥಕ್ಕಳಿ ,ರೈತರ ಉಳುಮೆ , ಕೋಳಿಜಗಳ,ಆಟಿಕಳಂಜ, ಸಂಗೀತ ವಾದ್ಯ, ಹುಲಿವೇಷ, ಬಂಜಾರ ನೃತ್ಯ, ಬುಡಕಟ್ಟು ಜನಾಂಗ ನೃತ್ಯ, ಇತ್ಯಾದಿ ರಮಣೀಯ ಕಲಾಕೃತಿಗಳನ್ನು ಮಾಡಿ ಜನರ ಕಣ್ಮನ ಸೆಳೆದಿದ್ದಾರೆ.
ಗೂಡು ದೀಪಕ್ಕೆ ಒಲಿದು ಬಂದ ಪ್ರಶಸ್ತಿಗಳು :
ಇವರ ಈ ವಿಶೇಷ ರೀತಿಯ ಗೂಡುದೀಪಗಳಿಗೆ ಹಲವು ಪ್ರಶಸ್ತಿ ಹಾಗೂ ಪುರಸ್ಕಾರಗಳು ಇವರನ್ನರಸಿ ಬಂದಿವೆ. * ಚಿನ್ನದ ಪದಕ – ದೀಪೋತ್ಸವ ಸೋಮೇಶ್ವರ,*ಬೆಳ್ಳಿ ಪದಕ -ನಮ್ಮ ಕುಡ್ಲ ಕುದ್ರೋಳಿ,*ಚಿನ್ನದ ಪದಕ- ಜ್ಯೋತಿ ಯುವಕ ಮತ್ತು ಮಹಿಳಾ ಮಂಡಲ ಕಾಳಿಕಾಂಬ ,ಕಾರ್ಕಳ ಇವಿಷ್ಟು ಮಾತ್ರವಲ್ಲದೇ ಹಲವು ಸನ್ಮಾನಗಳಿಗೂ ಪಾತ್ರರಾಗಿದ್ದಾರೆ ಜಗದೀಶ್ ಅಮೀನ್ ಅವರು.