ನ್ಯೂಸ್ ನಾಟೌಟ್: ಕನ್ನಡ ಚಿತ್ರರಂಗದ ಇತಿಹಾಸವನ್ನೇ ಬದಲಿಸಿದ ಕಾಂತಾರ ಸಿನಿಮಾ ಈಗಾಗಲೇ ತುಳು ಬಾಷೆಯಲ್ಲಿ ಬಿಡುಗಡೆ ಆಗಿದೆ. ಈಗಾಗಲೆ 4೦೦ ಕೋಟಿ ಬಾಚಿದ ಕಾಂತಾರ ಸಿನಿಮಾ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತಿತರ ಭಾಷೆಗಳಲ್ಲಿ ಡಬ್ ಆಗಿ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ತುಳುವಿನಲ್ಲೂ ಕಾಂತಾರ ಸಿನಿಮಾ ಶುಕ್ರವಾರ ಬಿಡುಗಡೆಗೊಂಡಿದೆ. ಮೊದಲ ದಿನವೇ ಬೊಂಬಾಟ್ ಪ್ರದರ್ಶನ ಕಂಡಿದೆ.
ತುಳು ಸಿನಿಮಾವು ಮಂಗಳೂರಿನ ಪಿವಿಆರ್, ಸಿನಿ ಪೊಲೀಸ್, ಬಿಗ್ ಸಿನಿಮಾಸ್, ಸಿನಿ ಗ್ಯಾಲಕ್ಸಿ ಸುರತ್ಕಲ್, ಭಾರತ್ ಸಿನಿಮಾಸ್ ಪಡುಬಿದ್ರಿ, ಉಡುಪಿಯ ಮಲ್ಟಿಪ್ಲೆಕ್ಸ್ ಮತ್ತು ಸಿಂಗಲ್ ಸ್ಕ್ರೀನ್ಗಳಲ್ಲಿ ಕಾಂತಾರ ಬಿಡುಗಡೆಗೆಯಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ತುಳು ಸಿನಿಮಾ ಪ್ರದರ್ಶನದಿಂದ ದೂರ ಇದ್ದ ಸುಚಿತ್ರಾ ಪ್ರಭಾತ್ ಟಾಕೀಸ್ನಲ್ಲೂ ಈ ಬಾರಿ ಕಾಂತಾರ ಪ್ರದರ್ಶನಗೊಳ್ಳುತ್ತಿರುವುದು ವಿಶೇಷವಾಗಿದೆ. ಬೆಳಗ್ಗೆ ಮತ್ತು ಸಂಜೆ ದಿನದಲ್ಲಿ ಎರಡು ಶೋ ನಿಗದಿಯಾಗಿದೆ.
ಮಲ್ಟಿಪ್ಲೆಕ್ಸ್ಗಳಲ್ಲಿ ದಿನದಲ್ಲಿ ಮೂರ್ನಾಲ್ಕು ಶೋ ನಿಗದಿಯಾಗಿದೆ. ಮೊದಲ ದಿನ ಮುಂಗಡ ಬುಕ್ಕಿಂಗ್ ಅಷ್ಟಾಗಿ ಕಂಡುಬಂದಿಲ್ಲ. ಬುಕ್ ಮೈ ಶೋದಲ್ಲಿ ಕಾಂತಾರ ತುಳು ಪೋಸ್ಟರ್ ಸದ್ದುಮಾಡುತ್ತಿದ್ದು, ಈಗಾಗಲೇ 1,700 ಮಂದಿ ಲೈಕ್ ಮಾಡಿದ್ದಾರೆ. ತುಳು ಭಾಷಿಗರ ಕುತೂಹಲ ಕೆರಳಿಸಿರುವ ಕಾಂತಾರ ತುಳು ಸಿನಿಮಾ ವಿಭಿನ್ನವಾಗಿ ಕರಾವಳಿಯ ಆಡುಭಾಷೆಯಲ್ಲಿ ಮೂಡಿಬರುವಂತೆ ಚಿತ್ರತಂಡ ಪ್ರಯತ್ನ ನಡೆಸಿದೆ. ಶಿವನ ಪಾತ್ರ(ರಿಷಬ್ ಶೆಟ್ಟಿ)ಕ್ಕೆ ಅರ್ಜುನ್ ಕಾಪಿಕಾಡ್, ಲೀಲಾ(ಸಪ್ತಮಿ ಗೌಡ)ಪಾತ್ರಕ್ಕೆ ಪ್ರಾರ್ಥನಾ ಸುದರ್ಶನ್, ಅರಣ್ಯಾಧಿಕಾರಿ(ಕಿಶೋರ್) ಪಾತ್ರಕ್ಕೆ ಶಶಿರಾಜ್ ಕಾವೂರು, ಧನಿ(ಅಚ್ಚುತ ಕುಮಾರ್) ಪಾತ್ರಕ್ಕೆ ದೇವದಾಸ್ ಕಾಪಿಕಾಡ್ ಡಬ್ಬಿಂಗ್ನಲ್ಲಿ ಸ್ವರ ದಾನ ಮಾಡಿದ್ದಾರೆ. ಹಾಡುಗಳನ್ನು ಬಹುತೇಕ ಕನ್ನಡದಲ್ಲೇ ಉಳಿಸಿಕೊಳ್ಳಲಾಗಿದೆ. ಕಾಂತಾರದಲ್ಲಿ ಶಿವನ ಸ್ನೇಹಿತ ಬುಲ್ಲಾನ ಪಾತ್ರ ಮಾಡಿದ ಮಂಗಳೂರಿನ ಸನಿಲ್ ಗುರು ತುಳು ಅವತರಣಿಕೆಯ ನಿರ್ವಹಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.