ನ್ಯೂಸ್ ನಾಟೌಟ್ : ಪ್ರತಿದಿನ ಮುಂಜಾನೆ ಹಾಸಿಗೆಯಿಂದ ಎದ್ದ ಕೂಡಲೇ ಹಲ್ಲುಜ್ಜುವುದು ವಾಡಿಕೆ. ಆದರೆ ಕೆಲವರು ರಾತ್ರಿ ಕೂಡ ಬ್ರೆಷ್ ಮಾಡಿ ಮಲಗುತ್ತಾರೆ. ಹಾಗಾದರೆ ರಾತ್ರಿ ಬ್ರೆಷ್ ಮಾಡುವುದು ಎಷ್ಟು ಮುಖ್ಯ. ಮಲಗುವ ಮೊದಲು ಏಕೆ ಬ್ರೆಷ್ ಮಾಡಬೇಕು ಅನ್ನುವುದರ ಬಗೆಗಿನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ನಾವು ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತೇವೊ ಹಾಗೇಯೇ ಹಲ್ಲಿನ ಬಗ್ಗೆ ಕೂಡ ಕಾಳಜಿ ವಹಿಸಬೇಕು. ಹಲ್ಲಿನ ಬಗ್ಗೆ ಕಾಳಜಿ ವಹಿಸದಿದ್ದರೆ ಸಮಸ್ಯೆಗಳು ಎದುರಾಗುತ್ತದೆ. ಹಲ್ಲನ್ನು ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದರೆ ಕೊಳೆ ಸಂಗ್ರಹವಾಗಿ ಎಲ್ಲ ಹಲ್ಲುಗಳನ್ನು ತೆಗಿಸುವಂತಹ ಸ್ಥಿತಿ ಬರಬಹುದು. ಹಲ್ಲು ಇಲ್ಲದಿದ್ದರೆ ಹೇಗೆ ಇರಬಹುದು ಪರಿಸ್ಥಿತಿ ನೀವೇ ಊಹಿಸಿ. ಹಾಗಾಗೀ ಎಚ್ಚರಿಕೆಯಿಂದ ಕಾಳಜಿ ವಹಿಸಿಕೊಳ್ಳಿ. ಹಲ್ಲುಗಳ ಮಧ್ಯೆ ಕೊಳೆ ಸಂಗ್ರಹವಾಗದಂತೆ ಬೆಳಗ್ಗೆ ಮಾತ್ರವಲ್ಲದೆ ರಾತ್ರಿ ಮಲಗುವಾಗಲೂ ಹಲ್ಲುಜ್ಜಬೇಕು. ಹಲ್ಲು ಮತ್ತು ಬಾಯಿಗೆ ಸಂಬಂಧಪಟ್ಟ ಕಾಯಿಲೆಗಳಿಂದ ದೂರವಿರಬೇಕಾದರೆ ರಾತ್ರಿ ಕೂಡ ಬ್ರೆಷ್ ಮಾಡುವುದು ಉತ್ತಮ.
ರಾತ್ರಿ ಹಲ್ಲುಜ್ಜದಿದ್ದರೆ ಆಗುವ ದುಷ್ಪರಿಣಾಮ ಏನು?
ರಾತ್ರಿ ಹಲ್ಲುಜ್ಜದೆ ಮಲಗುವುದರಿಂದ ಬಾಯಿಗೆ ಸೋಂಕು ತಗಲುವ ಸಾಧ್ಯತೆ ಇದೆ. ರಾತ್ರಿ ಆಹಾರವನ್ನು ಸೇವಿಸಿದ ನಂತರ ಎಲ್ಲಾ ಬ್ಯಾಕ್ಟೀರಿಯಗಳು ಬಾಯಿಯಲ್ಲಿ ಸಂಗ್ರಹವಾಗುತ್ತವೆ ಮತ್ತು ಸೋಂಕಿಗೆ ಕಾರಣವಾಗುತ್ತವೆ. ಹಾಗಾಗಿ ಕಡ್ಡಾಯವಾಗಿ ರಾತ್ರಿ ಮಲಗುವ ಮೊದಲು ಹಲ್ಲುಜ್ಜಿ ಬಾಯಿಯನ್ನು ಸ್ವಚ್ಛಗೊಳಿಸಬೇಕು.
ರಾತ್ರಿ ಹಲ್ಲುಜ್ಜದೇ ಇರುವುದು ಬಾಯಿಯ ದುರ್ವಾಸನೆಗೆ ಪ್ರಮುಖ ಕಾರಣವಾಗಿದೆ. ಹಲ್ಲುಜ್ಜದ ಕಾರಣ ಕೆಲವು ಬ್ಯಾಕ್ಟೀರಿಯಾಗಳು ಲಾಲಾರಸದೊಂದಿಗೆ ಮಿಶ್ರಣಗೊಳ್ಳುತ್ತವೆ. ಇದು ಕೆಟ್ಟ ಉಸಿರಾಟವನ್ನು ಉಂಟುಮಾಡುತ್ತದೆ. ಹಾಗಾಗೀ ರಾತ್ರಿಯಲ್ಲಿ ಬ್ರೆಷ್ ಮಾಡುವ ಮೂಲಕ ಬಾಯಿಯ ದುರ್ವಾಸನೆಯನ್ನು ದೂರ ಮಾಡಬಹುದು.
ಸರಿಯಾಗಿ ಬ್ರೆಷ್ ಮಾಡದೇ ಇದ್ದರೆ ಹಲ್ಲುಗಳು ದುರ್ಬಲವಾಗುತ್ತವೆ ಮತ್ತು ನಿಧಾನವಾಗಿ ಹಲ್ಲು ಹೋಗುತ್ತದೆ. ಅಲ್ಲದೆ ಸಣ್ಣ ವಯಸ್ಸಿನಲ್ಲೇ ಹಲ್ಲುಗಳು ಕೊಳೆತು ಹೋಗಲು ಪ್ರಾರಂಭವಾಗುತ್ತದೆ.
ಆಹಾರ ಸೇವನೆ ಮಾಡಿದ ಬಳಿಕ ಕೊಳಕು ಆಹಾರವು ರಾತ್ರಿಯಿಡೀ ಬಾಯಿಯಲ್ಲಿ ಸಂಗ್ರಹವಾಗುತ್ತದೆ ಮತ್ತು ಒಸಡುಗಳನ್ನು ದುರ್ಬಲಗೊಳಿಸುತ್ತದೆ. ದುರ್ಬಲ ಮತ್ತು ಕೊಳಕು ಹಲ್ಲುಗಳು ವಸಡುಗಳಿಗೆ ಸೋಂಕು ಹರಡುತ್ತವೆ. ಆದ್ದರಿಂದ ವಸಡುಗಳು ಆರೋಗ್ಯಕರವಾಗಿರಬೇಕೆಂದರೆ ರಾತ್ರಿ ಬ್ರೆಷ್ ಮಾಡುವುದು ಅವಶ್ಯಕ. ರಾತ್ರಿಯಲ್ಲಿ ಹಲ್ಲುಜ್ಜದೇ ಇದ್ದರೆ ನ್ಯುಮೋನಿಯಾ, ಬುದ್ಧಿಮಾಂದ್ಯತೆ ಮತ್ತು ಉಸಿರಾಟದ ಕಾಯಿಲೆಗಳು ಸಹ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ರಾತ್ರಿ ಮತ್ತು ಬೆಳಗ್ಗೆ ಹಲ್ಲುಜ್ಜಲು ಮರೆಯಬೇಡಿ.