ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಜನ ವಾಹನಗಳನ್ನು ತುಂಬಾನೇ ಅವಲಂಬಿಸಿದ್ದಾರೆ.ಅದರಲ್ಲೂ ಆಟೋ ರಿಕ್ಷಾಗಳಿಗೆ ಡಿಮ್ಯಾಂಡ್ ಹೆಚ್ಚಿದೆ.ಸ್ವಂತ ವಾಹನ ಇಲ್ಲದೇ ಇರುವವರು ಆಟೋ ರಿಕ್ಷಾ ಅಥವಾ ಬಸ್ಸಲ್ಲೇ ಜಾಸ್ತಿ ಪ್ರಯಾಣ ಮಾಡುತ್ತಾರೆ.
ಕೆಲವೊಂದು ಸಮಯದಲ್ಲಿ ಬಸ್ಸನ್ನು ಕಾದು ಕುಳಿತು ಮನೆ ಸೇರುವಷ್ಟರೊಳಗೆ ಅಟೋ ರಿಕ್ಷಾದಲ್ಲಿ ಹೋಗಿ ಬೇಗ ಮನೆ ತಲುಪಬಹುದು ಎಂದು ಅನಿಸುವುದು ಇದೆ.ಅದಕ್ಕಾಗಿ ಆಟೋ ರಿಕ್ಷಾದಲ್ಲಿ ಪ್ರಯಾಣ ಬೆಳೆಸುವವರೇ ಹೆಚ್ಚು. ಆದರೆ ಆಟೋ ರಿಕ್ಷಾದಲ್ಲಿ ಪ್ರಯಾಣ ಮಾಡುವಾಗ ಸಾಮಾನ್ಯವಾಗಿ ಐದು ಮಂದಿ ಪ್ರಯಾಣಿಸುವುದನ್ನು ನೋಡಿದ್ದೇವೆ. ಅಬ್ಬಬ್ಬಾ ಅಂದ್ರೆ 10 ಮಂದಿ ಪ್ರಯಾಣ ಮಾಡಬಹುದು.ಇಲ್ಲೊಂದು ಕಡೆ ಒಂದು ಆಟೋ ರಿಕ್ಷಾದಲ್ಲಿ ಪ್ರಯಾಣ ಮಾಡಿದವರ ಸಂಖ್ಯೆ ಕೇಳಿದ್ರೆ ನೀವಂತು ಬೆಚ್ಚಿ ಬೀಳಬಹುದು!!
ಹೌದು, ಸದ್ಯ ಈ ಕುರಿತ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಒಂದು ರಿಕ್ಷಾದಲ್ಲಿ ಬರೋಬ್ಬರಿ 50 ಮಂದಿ ಪ್ರಯಾಣ ಬೆಳೆಸಿ ಪೊಲೀಸರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಈ ವಿಡಿಯೋ ಮಧ್ಯಪ್ರದೇಶದ ಬುಡಕಟ್ಟು ಜನ ಹೆಚ್ಚಿರುವ ಅಲಿರಾಜಪುರಕ್ಕೆ ಸಂಬಂಧಿಸಿದ್ದು,ಆಟೋದಲ್ಲಿ ಸುಮಾರು 50 ಜನರನ್ನು ತುಂಬಿಕೊಂಡು ಹೋಗಲಾಗಿದೆ.ಆಟೋದ ಸುತ್ತಲೂ ಪ್ರಯಾಣಿಕರು ನೇತಾಡುತ್ತಿದ್ದು,ಅಪಾಯದ ರೀತಿಯಲ್ಲಿ ಪ್ರಯಾಣಿಸುತ್ತಿರುವುದನ್ನು ನೀವು ಗಮನಿಸಬಹುದು.ಮಾತ್ರವಲ್ಲ ಮಹಿಳೆಯರು ಸೇರಿದಂತೆ ಮಕ್ಕಳು ಇದ್ದಾರೆ ಅನ್ನೋದು ವಿಶೇಷ.
ವಿಡಿಯೋವನ್ನು ಡಿ.7ರಂದು ಕಕ್ವಿ ಹೆಸರಿನ ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾಗಿದೆ.ವೈರಲ್ ವಿಡಿಯೋ ಪೊಲೀಸರ ಗಮನಕ್ಕೆ ಬಂದಿದ್ದು,ರಿಜಿಸ್ಟ್ರೇಶನ್ ನಂಬರ್ ಆಧಾರದ ಮೇಲೆ ಆಟೋ ಹುಡುಕಿ ದಂಡ ವಿಧಿಸಲು ಪೊಲೀಸರು ನಿರ್ಧರಿಸಿ ಆಟೋ ಹುಡುಕುತ್ತಿದ್ದಾರೆ.ಮತ್ತೊಂದೆಡೆ ಈ ಪ್ರದೇಶದಲ್ಲಿ ಬಸ್ ಸಂಚರಿಸುವುದಿಲ್ಲವೆಂದೂ ಹೇಳಲಾಗುತ್ತಿದೆ.ಅದೇನೆ ಇರಲಿ ಟಿಕೆಟ್ ದರ ಅಗ್ಗವಾಗಿದೆಯೆಂದು ಈ ರೀತಿ ಪ್ರಯಾಣ ಬೆಳೆಸಿ ಅಪಾಯ ಸಂಭವಿಸುವ ಮುನ್ನ ಪ್ರಯಾಣಿಕರು ನೂರು ಬಾರಿ ಯೋಚಿಸುವುದು ಒಳಿತು.ಬೇಗ ತಲುಪಬಹುದು ಎನ್ನುವ ಭರದಲ್ಲಿ ಅವಘಡಗಳಾದೇ ಇರಲಿ ಅನ್ನೊದೇ ನಮ್ಮ ಆಶಯವಾಗಿದೆ.