ನ್ಯೂಸ್ ನಾಟೌಟ್: ಮಂಗಳೂರಿನ ಪಂಪ್ ವೆಲ್ ನಲ್ಲಿ ವ್ಯಕ್ತಿಯೋರ್ವನಿಗೆ ಕಳೆದೆರಡು ವಾರಗಳ ಹಿಂದೆ ೧೦ ಲಕ್ಷ ರೂ. ಇತ್ತು ಎನ್ನಲಾದ ಹಣದ ಬಂಡಲ್ ವೊಂದು ಸಿಕ್ಕಿದ ಸುದ್ದಿ ಬಾರಿ ವೈರಲ್ ಆಗಿತ್ತು.ಆದರೆ ಆ ಹಣ ಯಾರದು? ಹಣದ ಬಂಡಲ್ ಅಲ್ಲಿಗೆ ಹೇಗೆ ಬಂತು ಎಂಬ ನೂರಾರು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದವು.
ಒಂದು ವಾರಗಳ ಕಾಲ ಹೊರ ಜಗತ್ತಿನ ಗಮನಕ್ಕೆ ಬಾರದೇ ಮುಚ್ಚಿಡಲಾಗಿದ್ದ ಪ್ರಕರಣ, ಮಾಧ್ಯಮಗಳ ವರದಿಗಳ ಬಳಿಕ ಬಹಿರಂಗವಾಗಿತ್ತು. ಆದರೆ ಈ ಹಣದ ನಿಜವಾದ ವಾರಸುದಾರರು ಸಿಗದೇ ಪ್ರಕರಣ ಯಕ್ಷ ಪ್ರಶ್ನೆಯಾಗಿ ಉಳಿದಿತ್ತು.ಪ್ರಕರಣದಲ್ಲಿ ಒಟ್ಟು ಹಣದ ಮೌಲ್ಯದ ಮಾಹಿತಿ ಹಾಗೂ ಪೊಲೀಸ್ ಇಲಾಖೆ ವಶ ಪಡಿಸಿಕೊಂಡ ನಗದಿನ ಮೌಲ್ಯದ ನಡುವೆ ವ್ಯತ್ಯಾಸ ಕಂಡು ಬಂದ ಹಿನ್ನಲೆ ತೀವ್ರ ಕುತೂಹಲ ಕೆರಳಿಸುವಂತೆ ಮಾಡಿತ್ತು.ಇದೀಗ ಈ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ.ನೋಟುಗಳ ವಾರಸುದಾರ ಎನ್ನಲಾದ ವ್ಯಕ್ತಿಯೋರ್ವರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.
ಏನಿದು ಘಟನೆ?
ನ.26ರಂದು ಶಿವರಾಜ್ ಮತ್ತು ತುಕಾರಾಮ್ ಎಂಬವರಿಗೆ ಪಂಪ್ವೆಲ್ ಬಸ್ ನಿಲ್ದಾಣದ ಬಳಿ ನೋಟಿನ ಬಂಡಲ್ಗಳು ಸಿಕ್ಕಿದ್ದವು. ಶಿವರಾಜ್ ಬಳಿ ಇದ್ದ 49,000 ರೂ.ಗಳನ್ನು ಪೊಲಿಸರು ವಶಪಡಿಸಿಕೊಂಡಿದ್ದರು. ತುಕಾರಾಮ್ ಬಳಿ ಇದ್ದ 2.99 ಲ.ರೂ.ಗಳನ್ನು ಅವರ ಮನೆಯವರು ಪೊಲೀಸರಿಗೆ ತಂದು ಒಪ್ಪಿಸಿದ್ದರು. ಆದರೆ ಹಣದ ನಿಜವಾದ ಮೂಲ ಪತ್ತೆಯಾಗಿರಲಿಲ್ಲ. ಬಂಡಲ್ಗಳಲ್ಲಿ ಒಟ್ಟು ಎಷ್ಟು ಹಣವಿತ್ತು ಎಂಬುದೂ ಗೊತ್ತಾಗಿರಲಿಲ್ಲ.ಹಣದ ವಾರಸುದಾರರು ಯಾರೆಂಬುದು ತಿಳಿದಿರಲಿಲ್ಲ. ಅವರು ದೂರು ಕೂಡ ನೀಡಿರಲಿಲ್ಲ.
ಇದೀಗ ಈ ನೋಟುಗಳ ವಾರಸುದಾರ ಎನ್ನಲಾದ ವ್ಯಕ್ತಿಯೋರ್ವರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ. ತಾನು ಅಡಿಕೆ ವ್ಯಾಪಾರಿಯಾಗಿದ್ದು ಹಣ ತೆಗೆದುಕೊಂಡು ಹೋಗುವಾಗ ಬಿದ್ದಿದೆ. ಅದರಲ್ಲಿ ಒಟ್ಟು 10 ಲ.ರೂ ಇತ್ತು ಎಂಬುದಾಗಿ ಆ ವ್ಯಕ್ತಿ ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ. ಹಣ ದೊರೆತ ಸಂದರ್ಭ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶಿವರಾಜ್ ತನಗೆ ದೊರೆತ ಬಂಡಲ್ ನಲ್ಲಿ 10 ಲಕ್ಷ ರೂಪಾಯಿ ಹಣವಿತ್ತು ಎಂದು ತಿಳಿಸಿದ್ದರು . ಆದರೆ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ ಕೇವಲ 3 ಲ. ರೂ ಹಣ ಲಭಿಸಿದೆ ಎಂದಷ್ಟೆ ಹೇಳಿದ್ದರು.ಇದೀಗ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮುಂದೆ ಯಾವ ರೀತಿ ಬೆಳವಣಿಗೆಗಳಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.