ನ್ಯೂಸ್ ನಾಟೌಟ್: ಕರ್ನಾಟಕ ರಾಜ್ಯ ಸರಕಾರ ಅತಿಥಿ ಶಿಕ್ಷಕರಿಗೆ ಸಿಹಿ ಸುದ್ದಿ ನೀಡಿದೆ. ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ವಿಷಯ ಶಿಕ್ಷಕರ ಹುದ್ದೆಗಳು ಖಾಲಿ ಇದೆ. ಇದರಿಂದ ತಾತ್ಕಾಲಿಕವಾಗಿ ಹೆಚ್ಚುವರಿ 750 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಈ ಮೂಲಕ ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ನೀಡಿದೆ.
ಈ ಬಗ್ಗೆ ಸಾರ್ವಜನಿಕ ಶಿಕ್ಷಣಲಾಖೆಯ ನಿರ್ದೇಶಕರು ಅತೀ ತುರ್ತು ಜ್ಞಾಪನೆಯ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಈಗಾಗಲೇ 5159 ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ಗೌರವಧನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿರುವುದಾಗಿ ತಿಳಿಸಿದ್ದಾರೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಇರುವಂತ ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರ ಬೇಡಿಕೆಯನ್ನು ಸಲ್ಲಿಸಲಾಗಿದೆ. ದಿನಾಂಕ 16-12-2022ರಂದು ಇದ್ದಂತೆ ಈಗಾಗಲೇ ಹಂಚಿಕೆ ಮಾಡಿರುವ ಅತಿಥಿ ಶಿಕ್ಷಕರ ಹುದ್ದೆಗಳನ್ನು ಹೊರತು ಪಡಿಸಿ ಒಟ್ಟು 3646 ಹುದ್ದೆಗಳು ಖಾಲಿ ಇರುತ್ತವೆ. ಈ ಹುದ್ದೆಗಳ ಸಂಖ್ಯೆಗೆ ಒಟ್ಟು 750 ಶಿಕ್ಷಕರನ್ನು ಸರ್ಕಾರವು ಒದಗಿಸಿರುವುದರಿಂದ ಆಯಾ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ಅನುಪಾತದಂತೆ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದಿದ್ದಾರೆ.
ಈ ಹಿನ್ನಲೆ ಹೆಚ್ಚುವರಿಯಾಗಿ 750 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರವು ಒಪ್ಪಿಗೆ ನೀಡಿದೆ. ಕೆಲ ಷರತ್ತುಗಳನ್ನು ಒಳಗೊಂಡು, ಅತಿಥಿ ಶಿಕ್ಷಕರನ್ನು ಹಂಚಿಕೆ ಮಾಡಿ ಅನುಮತಿ ನೀಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.