ನ್ಯೂಸ್ ನಾಟೌಟ್ : ಸುರತ್ಕಲ್ ಹಾಗೂ ಹೆಜೆಮಾಡಿ ಟೋಲ್ ಗೇಟ್ ಗೆ ಮದುವೆ ಮಾಡಿಸಲು ಊರವರನ್ನು ಆಮಂತ್ರಿಸುವ ಮದುವೆ ಕಾರ್ಡ್ ವೊಂದು ವೈರಲ್ ಆಗಿದೆ.
ಸುರತ್ಕಲ್ ನ ಅಕ್ರಮವಾಗಿದ್ದ ಟೋಲ್ ಗೇಟ್ ಎಂಬ ವಧುವನ್ನು ಹೆಜೆಮಾಡಿ ಟೋಲ್ ಗೇಟ್ ಎಂಬ ವರನೊಂದಿಗೆ ಮದುವೆಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಸರಕಾರದ ಕೇಂದ್ರ ಹೆದ್ದಾರಿ ಪ್ರಾಧಿಕಾರ ಸಚಿವರಾದ ನಿತಿನ್ ಗುಡ್ಕರಿ ಸಮ್ಮುಖದಲ್ಲಿ ನಳಿನ್ ಕುಮಾರ್ ಆವರ ಮನವಿಗೆ ಏರ್ಪಡಿಸಲಾಗಿದೆ. ತಾವುಗಳು ಬಂಧು ಸುರತ್ಕಲ್ ಮತ್ತು ಹೆಜೆಮಾಡಿ ಸುಂಕವನ್ನು ಒಂದೇ ಕಡೆ ಪಾವತಿಸಿ ಶುಭಹಾರೈಸಬೇಕಾಗಿ ವಿನಂತಿ, ಉಡುಗೊರೆಯೇ ಆಶೀರ್ವಾದ ‘ ಶುಭ ಕೋರುವವರು ಬಿಜೆಪಿ ಎಂಎಲ್ಎ ಗಳು ದಕ್ಷಿಣ ಕನ್ನಡ ಎಂದು ಬರೆಯಲಾಗಿದೆ. ಈ ಕಾರ್ಡ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸುರತ್ಕಲ್ ನ ಎನ್ಐಟಿಕೆ ಬಳಿಯಿದ್ದ ಆಕ್ರಮ ಟೋಲ್ ಗೇಟ್ ಇತ್ತೀಚಿಗೆ ಸಾರ್ವಜನಿಕರ ಭಾರೀ ಆಕ್ರೋಶದ ಹಿನ್ನಲೆಯಲ್ಲಿ ರದ್ದಾಗಿತ್ತು. ಇದಾದ ಬಳಿಕ ಹೆಜೆಮಾಡಿ ಮತ್ತು ಸುರತ್ಕಲ್ ಟೋಲ್ ಗಳನ್ನು ಸೇರಿಸಿ ದುಪ್ಪಟ್ಟು ಟೋಲ್ ಸಂಗ್ರಹ ಮಾಡಲಾಗುತ್ತಿತ್ತು .ಇದರ ವಿರುದ್ದ ಇದೀಗ ಕರಾವಳಿಯಲ್ಲಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಾರ್ವಜನಿಕರು ಸಜ್ಜಾಗಿದ್ದಾರೆ. ಇದೀಗ ಶುಭ ವಿವಾಹದ ಮದುವೆ ಆಮಂತ್ರಣ ಪತ್ರಿಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಿತ ಸ್ಥಳೀಯ ಶಾಸಕರನ್ನು ಮುಜುಗರಕ್ಕೆ ಸಿಲುಕಿಸಿದೆ.