ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದೆ ಅನ್ನುವ ದೂರು ಕೇಳಿ ಬರುತ್ತಿದೆ. ಇತ್ತೀಚೆಗೆ ವ್ಯಕ್ತಿಯೊಬ್ಬರ ಮೇಲೆ ನಾಯಿಗಳು ಅಲ್ಲಿ ದಾಳಿಯನ್ನೂ ನಡೆಸಿದ್ದವು. ಈ ಬೆನ್ನಲ್ಲೇ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಇಂದು (ಗುರುವಾರ) ಮತ್ತೆ ಇನ್ನೊಬ್ಬ ಭಕ್ತರಿಗೆ ಶ್ವಾನ ಕಚ್ಚಿದೆ. ಈ ಬೆನ್ನಲ್ಲೇ ಬೀದಿ ನಾಯಿಗಳ ನಿಯಂತ್ರಣ ಮಾಡಬೇಕು ಅನ್ನುವ ಕೂಗು ಮತ್ತಷ್ಟು ಹೆಚ್ಚಿದೆ.
ಗಾಯಾಳುವನ್ನು ಸುಬ್ರಹ್ಮಣ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು. ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲದುದರಿಂದ ಅವರನ್ನು ಕಡಬದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಎಂದು ತಿಳಿದು ಬಂದಿದೆ. ಬೀದಿ ನಾಯಿಗಳ ತೊಂದರೆ ಬಗ್ಗೆ ಹಲವು ದಿನಗಳಿಂದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನಲ್ಲಿ ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಆದರೆ ಇದುವರೆಗೆ ಯಾವುದೇ ಕ್ರಮವನ್ನೂ ತೆಗೆದುಕೊಳ್ಳಲಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.