ನ್ಯೂಸ್ ನಾಟೌಟ್: ನಮ್ಮ ಜನರು ನೀರಿನ ಸಮಸ್ಯೆ ಎದುರಾದಾಗ ಜನ ಪ್ರತಿನಿಧಿಗಳಾದ ನಮ್ಮನ್ನು ದೂರುತ್ತಾರೆ. ಅದು ಸರಿಯೂ ಕೂಡ. ನಾವು ನೀರು ಕೊಡಬಹುದು. ಆದರೆ ಮುಂದೊಂದು ದಿನ ಪಯಸ್ವಿನಿ ನದಿಯಲ್ಲಿ ನೀರೇ ಇಲ್ಲದಿದ್ದರೆ ನಾವು ನೀರು ಹೇಗೆ ಕೊಡುವುದು ಎಂದು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ತಿಳಿಸಿದ್ದಾರೆ.
ಸುಳ್ಯದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಕೃಷಿ ಮೇಳದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಜಲಸಂರಕ್ಷಣೆ ಅತ್ಯಂತ ಮುಖ್ಯವಾದದ್ದು. ಜಲಸಂರಕ್ಷಣೆಯ ಬಗ್ಗೆ ಜನರಿಗೆ ಕಾಳಜಿ ಇಲ್ಲ. ನೀರನ್ನು ಅತಿಯಾಗಿ ಬಳಸಿ ಪೋಲು ಮಾಡುತ್ತಿದ್ದಾರೆ. ಪಯಸ್ವಿನಿ ನೀರು ಇಂಗಿ ಹೋದರೆ, ಸುಳ್ಯದ ಜನರಿಗೆ ನೀರಿನ ಸಮಸ್ಯೆ ಎದುರಾಗಬಹುದು. ಹಾಗಾಗಿ ಇಂಗು ಗುಂಡಿ ಮಾಡಿ ಮಳೆಯ ನೀರನ್ನು ಉಳಿಸಿ ಅದನ್ನೆ ಬಳಕೆ ಮಾಡಬೇಕು ಹಾಗೂ ಮುಂದಿನ ದಿನಗಳಲ್ಲಿ ಜಲಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬರಿಗೂ ಉದ್ಯೋಗ ಹುಡುಕುವುದರ ಬಗ್ಗೆಯೇ ಚಿಂತೆ. ಉದ್ಯೋಗ ಸಿಗುವುದಿಲ್ಲ ಎಂದು ಹೇಳುತ್ತಿರುತ್ತಾರೆ. ಆದರೆ ಉದ್ಯೋಗ ನಮ್ಮ ಮಣ್ಣಿನಲ್ಲೇ ಇದೆ. ನಾವು ನಂಬಿದ ಕೃಷಿ ಭೂಮಿಗಳಲ್ಲಿ ಹಲವು ರೀತಿಯ ರೋಗಗಳು ಬರುತ್ತದೆ. ಕೃಷಿಕರು ಯೋಚನೆ ಮಾಡಬೇಕು. ಕೃಷಿ ಕ್ಷೇತ್ರ ಕೂಡ ಒಂದು ಉದ್ಯೋಗ ಎನ್ನುವ ರೀತಿಯಲ್ಲಿ ಕೆಲಸ ಮಾಡಬೇಕು. ಸಮಸ್ಯೆಗಳು ಇಲ್ಲದ ಜಗತ್ತೆ ಇಲ್ಲ. ಉದ್ಯೋಗದಲ್ಲರುವ ಜನರು ಯಾವುದೇ ರೀತಿಯ ಅಕ್ಕಿ ಹಾಗೂ ಇತರೆ ಬೆಳೆಗಳನ್ನು ಬೆಳೆಸಲು ಸಾಧ್ಯವಿಲ್ಲ. ಅದು ಕೃಷಿಕರಿಂದ ಮಾತ್ರ ಸಾಧ್ಯ. ತಾವು ಇನ್ನೊಬರ ಅಡಿಯಲ್ಲಿ ಕೆಲಸ ಮಾಡುವುದಲ್ಲ, ತಾನೇ ಸ್ವಂತಿಕೆಯಲ್ಲಿ ಕೆಲಸ ಮಾಡಬೇಕು . ಜೊತೆಗೆ ಸ್ವಾವಲಂಬಿಯಾಗಿ ಬದುಕಬೇಕು ಎಂದು ವಿನಯ್ ಅಭಿಪ್ರಾಯ ವ್ಯಕ್ತಪಡಿಸಿದರು.