ನ್ಯೂಸ್ ನಾಟೌಟ್ :ರಾಜ್ಯದ ಮೊದಲ ತೇಲುವ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸೇತುವೆಯನ್ನು ಶಾಸಕ ರಘುಪತಿ ಭಟ್ ಉದ್ಘಾಟಿಸಿದರು. ಕಳೆದ ಕೆಲ ತಿಂಗಳ ಹಿಂದೆ ಈ ಸೇತುವೆ ಉದ್ಘಾಟನೆಯಾದ ಬೆನ್ನಲ್ಲೇ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿತ್ತು.ಇದೀಗ ಈ ತೇಲುವ ಸೇತುವೆಗೆ ಭಾನುವಾರ ಮತ್ತೆ ಚಾಲನೆ ನೀಡಲಾಯಿತು.
ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ:
ಹಲವು ಪ್ರವಾಸಿ ತಾಣಗಳನ್ನು ಹೊಂದಿರುವ ಕರಾವಳಿ ತೀರದತ್ತ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರವಾದ ಮಲ್ಪೆ ಬೀಚ್ಗೆ ದಿನಂಪ್ರತಿ ಸಾವಿರಾರು ಪ್ರವಾಸಿಗರು ಭೇಟಿ ನೀಡಿ, ಸಮುದ್ರ ಸ್ನಾನದೊಡನೆ ತಂಪಿನ ಅನುಭವ ಪಡೆಯುತ್ತಿದ್ದಾರೆ. ಮಲ್ಪೆ ಬೀಚ್ನಲ್ಲಿ ಸಮುದ್ರಕ್ಕಿಳಿದು ಅಲೆಗಳೊಂದಿಗೆ ಆಟವಾಡುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಪ್ರತಿದಿನ 4ರಿಂದ 5 ಸಾವಿರ ಪ್ರವಾಸಿಗರು ಮಲ್ಪೆ ಬೀಚ್ಗೆ ಭೇಟಿ ನೀಡುತ್ತಿದ್ದರೆ, ವಾರಾಂತ್ಯದಲ್ಲಿ ಈ ಸಂಖ್ಯೆ 10 ಸಾವಿರಕ್ಕೆ ತಲುಪುತ್ತದೆ ಎನ್ನುವುದು ವಿಶೇಷ..
ಆಕರ್ಷಣೆಯ ಕೇಂದ್ರ:
ಪ್ರವಾಸಿಗರ ಆಕರ್ಷಣೆಗಾಗಿ ಬೋಟಿಂಗ್, ವಾಟರ್ ಸ್ಕೂಟರ್, ಫ್ಲೋಟಿಂಗ್ ಬ್ರಿಡ್ಜ್, ಪ್ಯಾರಾಚೂಟ್ ಮೊದಲಾದ ಮನೋರಂಜನಾ ಸಾಧನ ಲಭ್ಯವಿದ್ದು, ಪ್ರವಾಸಿಗರು ಇವುಗಳ ಭರಪೂರ ಆನಂದ ಪಡೆಯುತ್ತಿದ್ದಾರೆ. ಇದೀಗ ರಾಜ್ಯದಲ್ಲಿಯೇ ಪ್ರಥಮ ತೇಲುವ ಸೇತುವೆ ಆರಂಭಗೊಂಡಿದ್ದು,ಪ್ರವಾಸಿಗರಿಗೆ ಮನರಂಜನೆ ನೀಡಲಿದೆ.ಇದು ಮಲ್ಪೆ ಬೀಚ್ನ ಪ್ರಮುಖ ಆಕರ್ಷಣೆ ಕೂಡ ಹೌದು.ಮುಂದಿನ ದಿನಗಳಲ್ಲಿ ಸಾವಿರಾರು ಪ್ರವಾಸಿಗರು ಬಂದು ಮೋಜುಮಸ್ತಿಯಲ್ಲಿ ತೊಡಗಿಕೊಳ್ಳಲಿದ್ದಾರೆ.