ನ್ಯೂಸ್ ನಾಟೌಟ್ : ಮಂಗಳೂರು ನಗರದ ಕೃಷ್ಣಾಪುರದಲ್ಲಿ ಶನಿವಾರ ರಾತ್ರಿ ನಡೆದ ಅಬ್ದುಲ್ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.ಬಂಧಿತರ ಪೈಕಿ ಇಬ್ಬರು ಕೃತ್ಯ ಎಸಗಿದ ಆರೋಪಿಗಳಾಗಿದ್ದರೆ, ಇನ್ನೋರ್ವ ಆರೋಪಿಗಳಿಗೆ ಪರಾರಿಯಾಗಲು ನೆರವಾದವನು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.ನೈತಂಗಡಿ ಕೃಷ್ಣಾಪುರ ನಿವಾಸಿ ಶೈಲೇಶ್ ಯಾನೇ ಶೈಲೇಶ್ ಪೂಜಾರಿ (21), ಉಡುಪಿ ಹೆಜಮಾಡಿ ನಿವಾಸಿ ಸವೀನ್ ಕಾಂಚನ್ ಯಾನೇ ಮುನ್ನ (24),ಕೃಷ್ಣಾಪುರ 3ನೇ ಬ್ಲಾಕ್ ನಿವಾಸಿ ಪವನ್ ಅಲಿಯಾಸ್ ಪಚ್ಚು (23) ಬಂಧಿತ ಆರೋಪಿಗಳು.
ಸುದ್ದಿಗಾರರೊಂದಿಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ಆರೋಪಿಗಳನ್ನು ರಾತ್ರಿ ವೇಳೆ ಬಂಧಿಸಲಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲಾಗುವುದು ಎಂದು ಹೇಳಿದ್ದಾರೆ. 14 ದಿನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.ಇವರಲ್ಲಿ ಇಬ್ಬರು ನೇರ ಭಾಗಿಯಾಗಿದ್ದು, ಓರ್ವ ಅವರನ್ನು ಬೈಕ್ ನಲ್ಲಿ ತಂದು ಬಿಟ್ಟಿದ್ದ ಎಂದು ತಿಳಿದು ಬಂದಿದೆ. ಭಾನುವಾರ ರಾತ್ರಿ ಕಾಪುವಿನ ಲಾಡ್ಜ್ ಒಂದರಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದರು.
ಕೊಲೆಗೆ ಕಾರಣ ಏನು ಎನ್ನುವುದು ಪೂರ್ಣ ತನಿಖೆ ಬಳಿಕ ತಿಳಿಯಲಿದೆ. ಮೂವರಲ್ಲಿ ಇಬ್ಬರು ಈ ಹಿಂದೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರಾಗಿದ್ದು, 2021ರಲ್ಲಿ ನಡೆದ ಕೊಲೆ ಯತ್ನ ಕೇಸ್ ವೊಂದರಲ್ಲೂ ಅವರು ಇದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.ಜಲೀಲ್ ಕೇಸ್’ನಲ್ಲಿ ಮಹಿಳೆಯರೂ ಸೇರಿ 10-12 ಜನರನ್ನು ವಶಕ್ಕೆ ಪಡೆದಿದ್ದಾರೆ. ಜಲೀಲ್ ಕುಟುಂಬಸ್ಥರು ಸೇರಿ ಕೆಲವರ ವಿಚಾರಣೆ ನಡೆದಿದೆ. ಆದರೆ ಸದ್ಯ ಒಟ್ಟು ಮೂವರನ್ನು ಮಾತ್ರ ಬಂಧನ ಮಾಡಲಾಗಿದೆ ಎಂದು ಹೇಳಿದರು.