ಸುಳ್ಯದ ಹಲವು ವರ್ಷಗಳ ಬೇಡಿಕೆಯಾಗಿರುವ 110ಕೆ.ವಿ. ಸಬ್ಸ್ಟೇಶನ್ ನಿರ್ಮಾಣಕ್ಕೆ ಕಾಲ ಸನ್ನಿಹಿತವಾಗಿದೆ.ಜ.10ಕ್ಕೆ ಶಂಕು ಸ್ಥಾಪನೆ ನೆರವೇರಲಿದೆ ಎಂದು ಸಚಿವ ಎಸ್. ಅಂಗಾರ ಹೇಳಿದ್ದಾರೆ. ಸುಳ್ಯ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡಿದ ಸಚಿವ ಎಸ್.ಅಂಗಾರರು, ಸುಳ್ಯದ ಬಹುಕಾಲದ ಬೇಡಿಕೆಯಾದ 110 ಕೆ.ವಿ. ಸಬ್ಸ್ಟೇಶನ್ ನಿರ್ಮಾಣಕ್ಕೆ ಜನವರಿ 10ರಂದು ಪೂ.10.30ಕ್ಕೆ ಸುಳ್ಯದ ವಿದ್ಯುತ್ ಸಬ್ ಸ್ಟೇಷನ್ ಬಳಿಯಲ್ಲಿ ಇಂಧನ ಸಚಿವರಾದ ವಿ.ಸುನಿಲ್ ಕುಮಾರ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಹೇಳಿದರು.
‘ಸಾರ್ವಜನಿಕರು ಸಹಕರಿಸಿ’: ಸಚಿವರ ಮನವಿ
ಸುಳ್ಯದಲ್ಲಿ 110 ಕೆ.ವಿ ವಿದ್ಯುತ್ ಸಬ್ ಸ್ಟೇಷನ್ ಸ್ಥಾಪನೆಯಿಂದ ಹಲವು ವರ್ಷಗಳಿಂದ ಜನರು, ಕೃಷಿಕರು ಅನುಭವಿಸುತ್ತಿರುವ ಜನರ ಸಮಸ್ಯೆ ಪರಿಹಾರವಾಗಬಲ್ಲದು. ಗುಣಮಟ್ಟದ ವಿದ್ಯುತ್ ವಿತರಣೆ ಮಾಡುವ ಮೂಲಕ ಲೋ ವೋಲ್ಟೇಜ್ ಸಮಸ್ಯೆ ಪರಿಹಾರ ಆಗುತ್ತದೆ ಎಂಬುದನ್ನು ಮನಗಂಡು ಈ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ.ಇದೀಗ ಸಬ್ಸ್ಟೇಶನ್ಗಿದ್ದ ಅರಣ್ಯ ಸಹಿತ ಎಲ್ಲ ಅಡೆತಡೆಗಳು ನಿವಾರಣೆಯಾಗಿದೆ ಎಂದರು.ಮುಂದುವರಿದು ಮಾತನಾಡಿದ ಅವರು ೨೦೦೭ರಲ್ಲಿ ೧೧೦ ಕೆ.ವಿ. ಸಬ್ ಸ್ಟೇಶನ್ ಕಾಮಗಾರಿಗೆ 16 ಕೋಟಿ 92 ಲಕ್ಷ ಅಂದಾಜು ಪಟ್ಟಿ ಮಾಡಲಾಗಿತ್ತು. ಈಗ ಅದರ ವೆಚ್ಚ 46 ಕೋಟಿ 20 ಲಕ್ಷಕ್ಕೆ ಏರಿದೆ. ಇದಕ್ಕೆ ಕೆಪಿಟಿಸಿಎಲ್ ಬೋರ್ಡ್ ಸಭೆಯಲ್ಲಿ ಮಂಜೂರಾತಿ ಬೇಕಾಗಿತ್ತು. ಹೊಸ ಅಂದಾಜು ವೆಚ್ಚಕ್ಕೆ ಇಂಧನ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನುಮತಿ ಸಿಕ್ಕಿದೆ ಎಂದು ಸಚಿವರು ಹೇಳಿದರು. ಆಂಧ್ರ ಪ್ರದೇಶದ ಗುತ್ತಿಗೆದಾರರೊಬ್ಬರಿಗೆ ಕಾಮಗಾರಿ ಗುತ್ತಿಗೆ ಕೊಡಲಾಗಿದೆ. ಕಾಮಗಾರಿ ಸಂದರ್ಭದಲ್ಲಿ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಿ ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಗಂಗಾಧರ್ ,ಕೆಪಿಟಿಸಿಎಲ್ ಸುಪರಿಟೆಂಡಂಟ್ ಇಂಜಿನಿಯರ್ ರವಿಕಾಂತ್ ಕಾಮತ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಸುಭೋದ್ ಶೆಟ್ಟಿ ಮೇನಾಲ, ಸುನಿಲ್ ಕೇರ್ಪಳ ಜತೆಗಿದ್ದರು.